ಸ್ಟೇಟ್ ಎಂಪ್ಲೋಯೀಸ್ ಆಂಡ್ ಟೀಚರ್ಸ್ ಎಸೋಸಿಯೇಶನ್ (ಸೆಟ್ಟೋ)ಜಿಲ್ಲಾ ಸಮಿತಿ ನೇತೃತ್ವದಲ್ಲಿ ಸದ್ಭಾವನಾ ಸಂದೇಶ ಯಾತ್ರೆ
ಮಂಜೇಶ್ವರ : ತೀವ್ರ ಬೆಲೆಯೇರಿಕೆಯಿಂದ ಜನಸಾಮಾನ್ಯರ ಬದುಕು ತೀವ್ರ ದುರ್ಭಲಗೊಳ್ಳುತ್ತಿದೆ.ಬಹುರಾಷ್ಟ್ರೀಯ ಸಂಸ್ಥೆಗಳ ಅಡಿಯಾಳುಗಳಾಗಿ ಅವರ ಬೇಕು-ಬೇಡಗಳನ್ನಷ್ಟೇ ಗಮನಿಸುವ ಕೇಂದ್ರ ಸರಕಾರ ರಾಷ್ಟ್ರದ ಶೇ.80 ರಷ್ಟಿರುವ ಜನಸಾಮಾನ್ಯರ ಬದುಕಿಗೆ ಮೋಸವೆಸಗುತ್ತಿರುವುದು ಖಂಡನೀಯವೆಂದು ಜಿಲ್ಲಾ ಕಾಂಗ್ರೆಸ್ಸ್ ಉಪಾಧ್ಯಕ್ಷ ಹಕೀಂ ಕುನ್ನಿಲ್ ಅಭಿಪ್ರಾಯ ವ್ಯಕ್ತಪಡಿಸಿದರು.
ಆರೋಗ್ಯ ವಿಮಾ ಯೋಜನೆಯನ್ನು ರಾಜ್ಯ ಸರಕಾರಿ ನೌಕರರು ಮತ್ತು ಅಧ್ಯಾಪಕರಿಗೂ ವಿಸ್ತರಿಸಬೇಕು,ಬೆಲೆಯೇರಿಕೆಯನ್ನು ನಿಯಂತ್ರಿಸಬೇಕು ಮೊದಲಾದ ಬೇಡಿಕೆಗಳೊಂದಿಗೆ ಸ್ಟೇಟ್ ಎಂಪ್ಲೋಯೀಸ್ ಆಂಡ್ ಟೀಚರ್ಸ್ ಎಸೋಸಿಯೇಶನ್ (ಸೆಟ್ಟೋ)ಜಿಲ್ಲಾ ಸಮಿತಿ ನೇತೃತ್ವದಲ್ಲಿ ಹಮ್ಮಿಕೊಂಡ ಸದ್ಭಾವನಾ ಸಂದೇಶ ಯಾತ್ರೆಗೆ ಶುಕ್ರವಾರ ಬೆಳಿಗ್ಗೆ ಉಪ್ಪಳದಲ್ಲಿ ಚಾಲನೆ ನೀಡಿದ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.
ಉಮ್ಮನ್‌ಚಾಂಡಿ ನೇತೃತ್ವದ ರಾಜ್ಯ ಸರಕಾರ ಕಳೆದ ಐದು ವರ್ಷಗಳಲ್ಲಿ ಮಹತ್ತರ ಯೋಜನೆಗಳ ಮೂಲಕ ಪ್ರಗತಿಪಥದ ದಿಕ್ಕು ತೋರಿಸುವಲ್ಲಿ ಯಶಸ್ವಿಯಾಗಿದೆ.ಆದರೆ ರಾಜ್ಯ ಸರಕಾರದ ಬಗ್ಗೆ ನಡೆಯುತ್ತಿರುವ ಸುಳ್ಳು ಅಪಪ್ರಚಾರಗಳಿಂದ ಜನರನ್ನು ವಂಚಿಸುತ್ತಿರುವುದು ಹೇಡಿತನವೆಂದು ಅವರು ತಿಳಿಸಿದರು.ಅಭಿವೃದ್ದಿಯೆಂದು ಜನರ ಮನಸ್ಸಿನಲ್ಲಿ ಭಾವನೆಗಳನ್ನು ಉತ್ತೇಜಿಸಿ ನೈಜತೆಯನ್ನು ಮರೆಮಾಚುವ ಕೇಂದ್ರ ಸರಕಾರದ ಎಡೆಬಿಡಂಗಿತನ ಉತ್ತಮ ಆಡಳಿತದ ಲಕ್ಷಣವಲ್ಲವೆಂದು ಅವರು ತಿಳಿಸಿದರು.
ಕಾಂಗ್ರೆಸ್ಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಸತೀಶನ್ ಪಾಚೇನಿ ಜಾಥಾ ನಾಯಕ ರಮೇಶನ್ ರವರಿಗೆ ಧ್ವಜ ಹಸ್ತಾಂತರಿಸಿ ಪರ್ಯಟನೆಯನ್ನು ಉದ್ಘಾಟಿಸಿದರು. ಸೆಟ್ಟೋ ಜಿಲ್ಲಾ ಮುಖಂಡ ಕುಂಞಿಕೃಷ್ಣನ್ ಕರಿಚ್ಚೇರಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾಂಗ್ರೆಸ್ಸ್ ಪ್ರಧಾನ ಕಾರ್ಯದರ್ಶಿ ಕೇಶವ ಪ್ರಸಾದ ನಾಣಿತ್ತಿಲು, ಮುಖಂಡರಾದ ಪಿ.ಶಶಿಧರನ್,ಕೆ.ರಾಧಾಕೃಷ್ಣನ್,ವಿ.ದಾಮೋದರನ್,ಟಿಟೋ ಜೋಸೆಫ್,ಕೆ.ರಾಜೀವನ್,ಸಿ.ಸುಕುಮಾರನ್,ಸುರೇಂದ್ರನ್ ಚೀಮೇನಿ,ಸುರೇಶ್ ಕೊಟ್ರಚ್ಚಾಲ್,ಮಂಗಲ್ಪಾಡಿ ಮಂಡಲ ಕಾಂಗ್ರೆಸ್ಸ್ ಅಧ್ಯಕ್ಷ ಸತ್ಯನ್ ಸಿ.ಉಪ್ಪಳ,ಜಿಲ್ಲಾ ಪಂಚಾಯತ್ ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ,ಯುವ ಕಾಂಗ್ರೆಸ್ಸ್ ಬ್ಲಾಕ್ ಕಾರ್ಯದರ್ಶಿ ನಾಸಿರ್ ಮೊಗ್ರಾಲ್ ಮೊದಲಾದವರು ಉಪಸ್ಥಿತರಿದ್ದರು.





