ಟ್ವೆಂಟಿ-20 ವಿಶ್ವಕಪ್: ಪ್ರಧಾನ ಸುತ್ತಿಗೆ ಅಫ್ಘಾನಿಸ್ತಾನ ತೇರ್ಗಡೆ

ಝಿಂಬಾಬ್ವೆ ವಿರುದ್ಧ ಭರ್ಜರಿ ಜಯ ಸಾಧಿಸಿದ ಅಫ್ಘಾನ್
ಮುಂಬೈ, ಮಾ.12:ನಾಗ್ಪುರದಲ್ಲಿ ಶನಿವಾರ ಮುಹಮ್ಮದ್ ನಬಿ ಬಾರಿಸಿದ ಜೀವನಶ್ರೇಷ್ಠ ಬ್ಯಾಟಿಂಗ್ ನೆರವಿನಿಂದ ಝಿಂಬಾಬ್ವೆ ತಂಡವನ್ನು 59 ರನ್‌ಗಳ ಅಂತರದಿಂದ ಸೋಲಿಸಿದ ಅಫ್ಘಾನಿಸ್ತಾನ ತಂಡ ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಪ್ರಧಾನ ಸುತ್ತಿಗೆ (ಸೂಪರ್-10)ತೇರ್ಗಡೆಯಾಗಿದೆ.
ಈ ಗೆಲುವಿನ ಮೂಲಕ ಅಫ್ಘಾನ್ ತಂಡ ವಿಶ್ವಕಪ್‌ನ ಗ್ರೂಪ್ 1ರಲ್ಲಿರುವ ಇಂಗ್ಲೆಂಡ್, ವೆಸ್ಟ್‌ಇಂಡೀಸ್, ಶ್ರೀಲಂಕಾ ಹಾಗೂ ದಕ್ಷಿಣ ಆಫ್ರಿಕ ತಂಡವನ್ನು ಸೇರಿಕೊಂಡಿದೆ.
ಶನಿವಾರ ನಡೆದ ವಿಶ್ವಕಪ್‌ನ ಮೊದಲ ಸುತ್ತಿನ ಮಾಡು-ಇಲ್ಲವೇ ಮಡಿ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದ ಅಫ್ಘಾನಿಸ್ತಾನ ತಂಡ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 186 ರನ್ ಕಲೆ ಹಾಕಿತು. ಮುಹಮ್ಮದ್ ನಬಿ(52), ಸಮೀವುಲ್ಲಾ ಶೆನ್ವಾರಿ (43) ಹಾಗೂ ಮುಹಮ್ಮದ್ ಶಹಝಾದ್(41) ಮಹತ್ವದ ಕೊಡುಗೆ ನೀಡಿದರು.
ಗೆಲ್ಲಲು ಕಠಿಣ ಸವಾಲು ಪಡೆದ ಝಿಂಬಾಬ್ವೆ ತಂಡ 17ರ ಹರೆಯದ ಸ್ಪಿನ್ ಬೌಲರ್ ರಶೀದ್ ಖಾನ್(3-11) ಹಾಗೂ ಹಮೀದ್ ಹಸನ್(2-11) ದಾಳಿಗೆ ಸಿಲುಕಿ 19.4 ಓವರ್‌ಗಳಲ್ಲಿ 127 ರನ್‌ಗೆ ಆಲೌಟಾಯಿತು.
ಅಗ್ರ ಕ್ರಮಾಂಕದ ದಾಂಡಿಗರು ದೊಡ್ಡ ಮೊತ್ತ ಗಳಿಸಲು ವಿಫಲರಾದರು. ಬಾಲಂಗೋಚಿ ಪನ್ಯಂಗರ(ಔಟಾಗದೆ 17) ಅಗ್ರ ಸ್ಕೋರರ್ ಎನಿಸಿಕೊಂಡರು.
ಬಿ ಗುಂಪಿನಲ್ಲಿ ಸತತ ಮೂರನೆ ಜಯ ಸಾಧಿಸಿ ಅಗ್ರ ಸ್ಥಾನ ಪಡೆದಿರುವ ಅಫ್ಘಾನಿಸ್ತಾನ ಪ್ರಧಾನ ಸುತ್ತಿಗೆ ತೇರ್ಗಡೆಯಾಗಿದೆ. ಝಿಂಬಾಬ್ವೆ ವಿರುದ್ಧ ಈ ಹಿಂದೆ ಆಡಿರುವ 4 ಟ್ವೆಂಟಿ-20 ಪಂದ್ಯಗಳಲ್ಲಿ ಜಯ ಸಾಧಿಸಿರುವ ಅಫ್ಘಾನಿಸ್ತಾನ ಇದೀಗ ವಿಶ್ವಕಪ್‌ನಲ್ಲೂ ತನ್ನ ಪ್ರಾಬಲ್ಯ ಮೆರೆದಿದೆ.
ಅಫ್ಘಾನ್‌ಗೆ ಶಹಝಾದ್ ಭದ್ರ ಬುನಾದಿ: ವಿಕೆಟ್‌ಕೀಪರ್-ದಾಂಡಿಗ ಮುಹಮ್ಮದ್ ಶಹಝಾದ್(40 ರನ್, 23 ಎಸೆತ, 7 ಬೌಂಡರಿ, 1 ಸಿಕ್ಸರ್) ನೂರ್ ಅಲಿ ಝದ್ರಾನ್(10) ಅವರೊಂದಿಗೆ ಮೊದಲ ವಿಕೆಟ್‌ಗೆ 4.5 ಓವರ್‌ಗಳಲ್ಲಿ 45 ರನ್ ಸೇರಿಸಿ ಅಫ್ಘಾನಿಸ್ತಾನಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು.
ಈ ವರ್ಷಾರಂಭದಲ್ಲಿ ಝಿಂಬಾಬ್ವೆ ವಿರುದ್ಧದ ಟ್ವೆಂಟಿ-20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಶತಕ (ಔಟಾಗದೆ 118) ಸಿಡಿಸಿದ ಅಫ್ಘಾನಿಸ್ತಾನದ ಮೊದಲ ದಾಂಡಿಗನೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಶೆಹಝಾದ್ ವಿಶ್ವಕಪ್‌ನಲ್ಲೂ ಉತ್ತಮ ಪ್ರದರ್ಶನ ನೀಡಿ ಅಫ್ಘಾನಿಸ್ತಾನ ತಂಡ ಸತತ 3 ಪಂದ್ಯಗಳಲ್ಲಿ ಜಯ ಸಾಧಿಸಲು ಪ್ರಮುಖ ಪಾತ್ರವಹಿಸಿದರು.
ನಬಿ-ಶೆನ್ವಾರಿ ಆಸರೆ: ಅಫ್ಘಾನಿಸ್ತಾನ 8ನೆ ಓವರ್‌ನಲ್ಲಿ 63 ರನ್‌ಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆಗ 5ನೆ ವಿಕೆಟ್‌ಗೆ ಸಮೀವುಲ್ಲಾರೊಂದಿಗೆ 98 ರನ್ ಜೊತೆಯಾಟ ನಡೆಸಿದ ಮುಹಮ್ಮದ್ ನಬಿ ತಂಡ 186 ರನ್ ಗಳಿಸಲು ನೆರವಾಗಿದ್ದರು. ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಚೊಚ್ಚಲ ಅರ್ಧಶತಕ ಸಿಡಿಸಿರುವ ನಬಿ ಕೊನೆಯ 5 ಓವರ್‌ಗಳಲ್ಲಿ 77 ರನ್ ಕಲೆ ಹಾಕಿದರು.
ಈ ಸಾಹಸಕ್ಕೆ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರು. ಝಿಂಬಾಬ್ವೆ ಮನೆಗೆ: ಹಾಂಕಾಂಗ್ ಹಾಗೂ ಸಾಟ್ಲೆಂಡ್ ವಿರುದ್ಧ ಗೆಲುವು ಸಾಧಿಸಿ ಸೂಪರ್-10 ಹಂತಕ್ಕೇರುವ ವಿಶ್ವಾಸದಲ್ಲಿದ್ದ ಝಿಬಾಂಬ್ವೆ ತಂಡ ಅಫ್ಘಾನ್ ವಿರುದ್ಧ ಹೀನಾಯವಾಗಿ ಸೋತು ಟೂರ್ನಿಯಿಂದ ಹೊರ ಬಿದ್ದಿದೆ.
ಅಫ್ಘಾನ್ ವಿರುದ್ಧ ಈ ತನಕ ಆಡಿರುವ 4 ಟ್ವೆಂಟಿ-20 ಪಂದ್ಯಗಳಲ್ಲಿ ಸೋತಿದ್ದ ಝಿಂಬಾಬ್ವೆಗೆ ಸತತ ಸೋಲಿನಿಂದ ಹೊರಬರಲು ಸಾಧ್ಯವಾಗಲಿಲ್ಲ. ಬೌಲಿಂಗ್‌ನಲ್ಲಿ ಪನ್ಯಂಗರ(3-32) ಹೊರತುಪಡಿಸಿ ಉಳಿದ ಬೌಲರ್‌ಗಳಿಗೆ ಅಫ್ಘಾನ್ ಬ್ಯಾಟ್ಸ್‌ಮನ್‌ಗಳಿಗೆ ಕಡಿವಾಣ ಹಾಕಲು ಸಾಧ್ಯವಾಗಲಿಲ್ಲ.
ಅಫ್ಘಾನಿಸ್ತಾನದ ಬೌಲಿಂಗ್‌ನಲ್ಲಿ ಕಿರಿಯ ಸ್ಪಿನ್ ಬೌಲರ್ ರಶೀದ್‌ಖಾನ್ 4 ಓವರ್‌ಗಳಲ್ಲಿ ಕೇವಲ 11 ರನ್ ನೀಡಿ 3 ವಿಕೆಟ್ ಉರುಳಿಸಿ ಗಮನ ಸೆಳೆದರು.
ಸಂಕ್ಷಿಪ್ತ ಸ್ಕೋರ್
ಅಫ್ಘಾನಿಸ್ತಾನ: 20 ಓವರ್‌ಗಳಲ್ಲಿ 186/6
(ಮುಹಮ್ಮದ್ ನಬಿ 52, ಸಮೀವುಲ್ಲಾ 43, ಮುಹಮ್ಮದ್ ಶಹಝಾದ್ 40, ಪನ್ಯಂಗರ 3-32)
ಝಿಂಬಾಬ್ವೆ: 19.4 ಓವರ್‌ಗಳಲ್ಲಿ 127 ರನ್‌ಗೆ ಆಲೌಟ್
(ಸಿಕಂದರ್ ರಝಾ 15, ಪನ್ಯಂಗರ ಔಟಾಗದೆ 17, ರಶೀದ್ ಖಾನ್ 3-11)
ಪಂದ್ಯಶ್ರೇಷ್ಠ: ಮುಹಮ್ಮದ್ ನಬಿ







