ಸೂಕ್ತ ದಾಖಲೆ,ಕಾನೂನು ಚೌಕಟ್ಟಿನಲ್ಲಿದ್ದರೆ ತನಿಖಾ ವರದಿಗಳು ಯಶಸ್ವಿ ಆಳ್ವಾಸ್ ಮೀಡಿಯಾ ಬರ್ನಲ್ಲಿ - ಎಸ್‌ಪಿ ಅಣ್ಣಾಮಲೈ

ಮೂಡುಬಿದಿರೆ: ತನಿಖಾ ವರದಿಗಾರರು ಮತ್ತು ದಕ್ಷ ಪೊಲೀಸ್ ಅಧಿಕಾರಿಗಳು ಸಮಾಜದಲ್ಲಿರುವ ಭ್ರಷ್ಟಾಚಾರದಂತಹ ಕಂಟಕಗಳನ್ನು ನಿವಾರಣೆ ಮಾಡಲು ಸಾಧ್ಯವಿದೆ. ತನಿಖಾ ವರದಿಗೆ ಸಂಬಂಧಿಸಿದ ಸೂಕ್ತ ದಾಖಲೆ, ಸ್ವರಕ್ಷೆ, ಕಾನೂನಿನ ಚೌಕಟ್ಟಿನಲ್ಲಿ ಮಾಡುವ ಕಾರ್ಯವೈಖರಿಯಿಂದ ತನಿಖಾ ವರದಿ ಯಶಸ್ವಿಯಾಗುತ್ತದೆ ಎಂದು ಉಡುಪಿ ಎಸ್‌ಪಿ ಕೆ.ಅಣ್ಣಾಮಲೈ ಅಭಿಪ್ರಾಯಪಟ್ಟರು. ಅವರು ಆಳ್ವಾಸ್ ಪತ್ರಿಕೋದ್ಯಮ ವಿಭಾಗದ ಆಶ್ರಯದಲ್ಲಿ ಎರಡು ದಿನಗಳ ಕಾಲ ನಡೆದ ವಿದ್ಯಾಗಿರಿಯ ಕುವೆಂಪು ಸಭಾಂಗಣದಲ್ಲಿ ನಡೆದ ‘ಆಳ್ವಾಸ್ ಮೀಡಿಯಾ ಬರ್’ ರಾಷ್ಟ್ರೀಯ ಮಾಧ್ಯಮ ಉತ್ಸವದಲ್ಲಿ ಶನಿವಾರದಂದು ‘ತನಿಖಾ ವರದಿಗಾರಿಕೆ’ ಕುರಿತು ಮಾತನಾಡಿದ ದಕ್ಷ ಪೊಲೀಸ್ ಅಧಿಕಾರಿಗಳಿಗೆ ಹಾಗೂ ಉತ್ತಮ ತನಿಖಾ ವರದಿಗಾರರಿಗೆ ಸಮಾಜದ ಸ್ವಾಸ್ಥ್ಯ ಕಾಪಾಡುವ ಉದ್ದೇಶವಿರುತ್ತದೆ. ಆದರೆ ಕೆಲವೊಮ್ಮೆ ಕಾನೂನಾತ್ಮಕ ರೀತಿಯಲ್ಲಿ ತನಿಖಾ ವರದಿಗಳು ಸೋಲು ಕಾಣುತ್ತಿವೆ. ತನಿಖಾ ವರದಿಗಾರರು, ತಮಗೆ ದಕ್ಷರೆನಿಸುವ ಪೊಲೀಸ್ ಅಧಿಕಾರಿಗಳ ಸಲಹೆಯನ್ನು ಪಡೆಯುವುದು ಅಗತ್ಯ. ಯಾವುದೇ ತನಿಖೆ ವರದಿ ಸಂದರ್ಭ ತಪಿತಸ್ಥರ ಮೇಲೆ ದಾಳಿ ಮಾಡುವ ಮೊದಲು ಪೊಲೀಸರಿಗೆ ಮಾಹಿತಿ ನೀಡುವುದು ಉತ್ತಮ ಎಂದು ಹೇಳಿದ ಅವರು ಪೊಲೀಸರಿಗೆ ಕಾನೂನಾತ್ಮಕ ಚೌಕಟ್ಟಿರುವುದರಿಂದ ಜನರಿಗೆ ಒಮ್ಮೆಲೇ ಮಾಹಿತಿ ನೀಡಲು ಸಾಧ್ಯವಿಲ್ಲ ಆದರೆ ಮಾಧ್ಯಮದವರು ಆ ಕೆಲಸ ಮಾಡಬಹುದು.
ಮಾಧ್ಯಮಗಳು ಗುಣಮಟ್ಟದ ಸುದ್ಧಿಗಳನ್ನು ಬಿತ್ತರಿಸುವ, ಪ್ರಕಟಿಸುವಲ್ಲಿ ಕ್ರಾಂತಿಯನ್ನು ಮಾಡಬೇಕಾಗಿದೆ. ಇದಕ್ಕಿಂತ ಮುಖ್ಯವಾಗಿ ವೀಕ್ಷಕರು, ಓದುಗರಲ್ಲಿಯೂ ಜಾಗೃತಿಯಾಗಬೇಕಾಗಿದೆ. ಮಾಧ್ಯಮದ ಗುಣಮಟ್ಟಕ್ಕೆ ಬೆಂಬಲ ನೀಡಿದಾಗ ಮಾತ್ರ ಜನರಿಗೆ ಮಾಧ್ಯಮವನ್ನು ವಿಮರ್ಶಿಸುವ, ಟೀಕಿಸುವ ನೈತಿಕ ಹಕ್ಕಿರುತ್ತದೆ. ಗುಣಮಟ್ಟದ ವರದಿಗೋಸ್ಕರ ಪತ್ರಿಕೆ, ಸುದ್ದಿವಾಹಿನಿಗಳಿಗೆ ಸೂಕ್ತ ರೀತಿಯಲ್ಲಿ ಪ್ರೋತ್ಸಾಹಿಸುವುದು ಅಗತ್ಯ ಎಂದು ಅಣ್ಣಾಮಲೈ ಅಭಿಪ್ರಾಯಪಟ್ಟರು.
ಸುವರ್ಣ ಸುದ್ದಿವಾಹಿನಿಯ ತನಿಖಾ ವರದಿಗಾರ್ತಿ ವಿಜಯಲಕ್ಷ್ಮೀ ಶಿಬರೂರು ಮಾತನಾಡಿ, ಪತ್ರಿಕೋದ್ಯಮಕ್ಕೆ ಭ್ರಮೆಯಿಂದ ಬರಬಾರದು. ಪತ್ರಿಕಾರಂಗದಲ್ಲಿ ಇನ್ನು ಕೂಡಾ ತನಿಖಾ ವರದಿಗಾರಿಕೆ ಹೆಚ್ಚು ಮಹತ್ವವನ್ನು ಪಡೆದುಕೊಂಡಿಲ್ಲ. ಆತ್ಮವಿಶ್ವಾಸ, ಕುತೂಹಲ, ಅಧ್ಯಯನ ಶೀಲತೆ, ಪ್ರಶ್ನಿಸುವ ಗುಣ, ಮನೆಯವರ ಬೆಂಬಲ, ರಿಸ್ಕ್ ತೆಗೆದುಕೊಳ್ಳುವ ಜಾಯಮಾನವಿದ್ದರೆ ತನಿಖಾ ವರದಿಗಾರಿಕೆಯಲ್ಲಿ ಯಶಸ್ವಿಯಾಗಬಹುದು. ತನಿಖಾ ವರಿದಿಗಾರರಾಗಬೆಕ್ಕೆನ್ನುವವರು ಮೊದಲು ತಮ್ಮ ಸುತ್ತಮುತ್ತಲು ನಡೆಯುವ ಅವ್ಯವಹಾರ, ಭ್ರಷ್ಟಾಚಾರಗಳನ್ನು ಬಯಲಿಗೆಳೆಯುವುದು ಹೇಗೆ ಅನ್ನುವ ಯೋಚನೆಯನ್ನು ಮಾಡಬೇಕು. ಪಕ್ಕಾ ಮಾಹಿತಿ, ಸೂಕ್ತ ದಾಖಲೆ, ಸಾಕ್ಷ್ಯಗಳ ಸಂಗ್ರಹ ಮಾಡುವ ಚಾತುರ್ಯತೆ ತನಿಖಾ ವರದಿಗಾರನಲ್ಲಿರುವುದು ಅಗತ್ಯ. ಅವ್ಯವಹಾರಗಳನ್ನು ಮಾಧ್ಯಮಗಳ ಬಯಲಿಗೆಳೆಯಬಹುದು ಎಂದರು.







