ಸಾವಿರ ವರ್ಷಗಳ ಹಿಂದಿನ ವಿಗ್ರಹಗಳು ನ್ಯೂಯಾರ್ಕ್‌ನಲ್ಲಿ ವಶ

ನ್ಯೂಯಾರ್ಕ್, ಮಾ. 12: ಒಂದು ಸಾವಿರ ವರ್ಷಗಳಿಗೂ ಹಿಂದಿನ ಎರಡು ಭಾರತೀಯ ವಿಗ್ರಹಗಳನ್ನು ತನಿಖಾಧಿಕಾರಿಗಳು ನ್ಯೂಯಾರ್ಕ್ ನಗರದ ಕ್ರಿಸ್ಟೀಸ್ ಹರಾಜು ಮನೆಯಿಂದ ಶುಕ್ರವಾರ ವಶಪಡಿಸಿಕೊಂಡಿದ್ದಾರೆ. ಈ ವಿಗ್ರಹಗಳನ್ನು ಭಾರತದಿಂದ ಹೊರಗೆ ಕಳ್ಳಸಾಗಣೆ ಮಾಡಲಾಗಿದ್ದು, ಅಂತಿಮವಾಗಿ ಅಮೆರಿಕವನ್ನು ತಲುಪಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮುಂದಿನ ವಾರ ನಡೆಯಲಿರುವ ಹರಾಜಿನಲ್ಲಿ ಇವುಗಳನ್ನು ಹರಾಜು ಹಾಕಲು ಉದ್ದೇಶಿಸಲಾಗಿತ್ತು.
ವಿಗ್ರಹಗಳ ಪೈಕಿ ಒಂದು 10ನೆ ಶತಮಾನದ ಬುದ್ಧನ ವಿಗ್ರಹವಾಗಿದೆ. ಬುದ್ಧನ ಅಕ್ಕಪಕ್ಕದಲ್ಲಿ ಇಬ್ಬರು ಸಹಾಯಕರು ನಿಂತಿದ್ದಾರೆ. ಇದರ ವೌಲ್ಯವನ್ನು 1.5 ಲಕ್ಷ ಡಾಲರ್ (ಸುಮಾರು ಒಂದು ಕೋಟಿ ರೂಪಾಯಿ) ಎಂದು ನಿಗದಿಪಡಿಸಲಾಗಿದೆ.
ಇನ್ನೊಂದು, 8ನೆ ಶತಮಾನದ ಕುದುರೆ ಸವಾರಿ ಮಾಡುವ ದೇವತೆಯದ್ದಾಗಿದೆ. ಇದರ ವೌಲ್ಯವನ್ನು 3 ಲಕ್ಷ ಡಾಲರ್ (ಸುಮಾರು 2 ಕೋಟಿ ರೂ.) ಎಂದು ನಿಗದಿಪಡಿಸಲಾಗಿದೆ.
ಭಾರತದಲ್ಲಿ ಮೊಕದ್ದಮೆಗಳನ್ನು ಎದುರಿಸುತ್ತಿರುವ ಕಳ್ಳಸಾಗಾಣಿಕೆದಾರನೊಬ್ಬ ಈ ಎರಡೂ ಪ್ರತಿಮೆಗಳನ್ನು ಅಮೆರಿಕದಲ್ಲಿ ಮಾರಾಟ ಮಾಡಿದ್ದಾನೆ ಎಂಬುದು ತನಿಖೆಯಿಂದ ಗೊತ್ತಾಗಿದೆ ಎಂದು ಅಮೆರಿಕದ ಫೆಡರಲ್ ಅಧಿಕಾರಿಗಳು ಹೇಳಿದ್ದಾರೆ.





