ಶೀಘ್ರವೇ ಆಧಾರ ಮೂಲಕ ರಸಗೊಬ್ಬರ ಸಬ್ಸಿಡಿ
ಹೊಸದಿಲ್ಲಿ,ಮಾ.12: ರಸಗೊಬ್ಬರ ಸಬ್ಸಿಡಿಯನ್ನು ಆಧಾರ ಮೂಲಕ ಫಲಾನುಭವಿಗಳಿಗೆ ನೇರವಾಗಿ ವರ್ಗಾಯಿಸುವ ವ್ಯವಸ್ಥೆ ಶೀಘ್ರವೇ ಆರಂಭಗೊಳ್ಳಲಿದೆ ಎಂದು ಹಣಕಾಸು ಸಚಿವಾಲಯವು ಹೇಳಿದೆ.
ಶನಿವಾರ ಇಲ್ಲಿ ಅಡ್ವಾನ್ಸಿಂಗ್ ಏಷ್ಯಾ ಸಮ್ಮೇಳನದ ನೇಪಥ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಶಕ್ತಿಕಾಂತ ದಾಸ್ ಅವರು,ರಸಗೊಬ್ಬರ ಮತ್ತು ಆಹಾರಗಳಂತಹ ಸಬ್ಸಿಡಿಗಳಿಗೆ ಆಧಾರ ಬಳಸಲು ಸರಕಾರವು ಚಿಂತನೆ ನಡೆಸಿದೆ. ಅಂತಿಮ ಫಲಾನುಭವಿಗಳಿಗೆ ಯಾವುದೇ ಅಡ್ಡಿ,ತೊಂದರೆಯಾಗದಂತೆ ಈ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು ಎಂದು ತಿಳಿಸಿದರು.
ಪ್ರಸಕ್ತ ವಿಶಿಷ್ಟ ಗುರುತು ಸಂಖ್ಯೆಯಾಗಿರುವ ಆಧಾರ್ ಎಲ್‌ಪಿಜಿ ಸಬ್ಸಿಡಿ ವರ್ಗಾವಣೆ ಮತ್ತು ಸರಕಾರದ ಇತರ ಕೆಲವು ಕಾರ್ಯಕ್ರಮಗಳಿಗೆ ಬಳಕೆಯಾಗುತ್ತಿದೆ.
ಮುಂಗಡಪತ್ರದಲ್ಲಿ ಘೋಷಣೆಯಾದ 11 ದಿನಗಳಲ್ಲಿ ಆಧಾರ್ ಅನ್ನು ಶಾಸನಬದ್ಧಗೊಳಿಸುವ ಮಸೂದೆಯು ಲೋಕಸಭೆಯಲ್ಲಿ ಅಂಗೀಕಾರಗೊಂಡಿರುವುದು ಸ್ವಾಗತಾರ್ಹವಾಗಿದೆ ಎಂದು ಹೇಳಿದ ಅವರು, ಇದರಿಂದಾಗಿ ಸಬ್ಸಿಡಿ ವರ್ಗಾವಣೆಯ ಸಮಗ್ರ ವ್ಯವಸ್ಥೆಯು ಹೆಚ್ಚು ಗುರಿಕೇಂದ್ರಿತ ಮತ್ತು ಕಾರ್ಯಸಮರ್ಥವಾಗಲಿದೆ ಎಂದು ಒತ್ತಿ ಹೇಳಿದರು.
ನೇರ ನಗದು ವರ್ಗಾವಣೆಯನ್ನು ಆಧಾರ ವ್ಯವಸ್ಥೆಯೊಂದಿಗೆ ತಳುಕು ಹಾಕಲಾಗುವುದು. ಇದೀಗ ಆಧಾರ್‌ಗೆ ಶಾಸನದ ಬೆಂಬಲವೂ ಸಿಕ್ಕಿದೆ ಎಂದರು.





