‘ಎತ್ತಿನಹೊಳೆ: ಕರಾವಳಿಯಲ್ಲಿ ಪ್ರತ್ಯೇಕತೆಯ ಕೂಗು’
ಮಂಗಳೂರು, ಮಾ.12: ಕರಾವಳಿಯಲ್ಲಿ ಎತ್ತಿನಹೊಳೆ ವಿಚಾರದಲ್ಲಿ ಪ್ರತ್ಯೇಕತೆಯ ಕೂಗು ಎದ್ದಿದೆ. ಈ ಬಗ್ಗೆ ಸರಕಾರ ಎಚ್ಚರ ವಹಿಸಬೇಕು. ಎತ್ತಿನಹೊಳೆ ಯೋಜನೆಯ ವಿಚಾರದಲ್ಲಿ ಕರಾವಳಿಯ ಜನರ ಬೇಡಿಕೆಯನ್ನು ನಿರ್ಲಕ್ಷಿಸಿದರೆ ಕರ್ನಾಟಕ ಹೋಳಾದೀತು ಎಂದು ಮಾಜಿ ಕೇಂದ್ರ ಸಚಿವ ಬಿ.ಜನಾರ್ದನ ಪೂಜಾರಿ ಎಚ್ಚರಿಸಿದ್ದಾರೆ.
ಮಂಗಳೂರಿನಲ್ಲಿಂದು ಸುದ್ದಿಗೋಷ್ಠಿಯ ಮಾತನಾಡಿದ ಅವರು, ಕರಾವಳಿಯ ಜೀವನದಿಯಾದ ನೇತ್ರಾವತಿ ಹರಿವಿಗೆ ತೊಡಕಾಗುವ ಯಾವುದೇ ಯೋಜನೆಗೆ ನಾನು ಇದುವರೆಗೆ ಬೆಂಬಲ ನೀಡಿಲ್ಲ. ಪ್ರಸಕ್ತ ಎತ್ತಿನಹೊಳೆ ಯೋಜನೆಯಿಂದ ನೇತ್ರಾವತಿ ನದಿ ಹರಿವಿಗೆ ತೊಡಕಾಗಲಿದೆ. ಕರಾವಳಿಯ ಜನತೆಯಲ್ಲಿ ಈ ಬಗ್ಗೆ ಕಳವಳ ಉಂಟಾಗಿದ್ದು, ಕರ್ನಾಟಕದಿಂದ ಪ್ರತ್ಯೇಕವಾಗಬೇಕು ಎನ್ನುವ ಕೂಗು ಕೇಳಿ ಬರುತ್ತಿದೆ. ಈ ಬಗ್ಗೆ ಸರಕಾರ ಗಂಭೀರವಾಗಿ ಪರಿಗಣಿಸಬೇಕು ಎಂದರು.
ರಮೇಶ್‌ಕುಮಾರ್ ವಿರುದ್ಧ ಆಕ್ರೋಶ: ಮಾಜಿ ಸ್ಪೀಕರ್ ರಮೇಶ್‌ಕುಮಾರ್ ಸದನದಲ್ಲಿ ತನ್ನ ಬಗ್ಗೆ ಅನುಚಿತವಾದ ಪದ ಬಳಕೆ ಮಾಡಿ ಟೀಕಿಸಿರುವುದನ್ನು ಖಂಡಿಸಿದ ಪೂಜಾರಿ, ರಮೇಶ್ ತನ್ನ ಮತ್ತು ಸದನದ ಘನತೆಗೆ ತಕ್ಕುದಾಗಿ ಮಾತನಾಡಬೇಕಾಗಿತ್ತು. ರಮೇಶ್ ಕುಮಾರ್ ಮೇಲೆ ಪಜಾತಿ, ಪಪಂಗಳಿಗೆ ಸೇರಿದವರ ನೂರು ಎಕ್ರೆ ಭೂಮಿ,ಅರಣ್ಯ ಭೂಮಿ ಕಬಳಿಕೆ ಆರೋಪವಿದೆ ಈ ಬಗ್ಗೆ ಅವರು ಜನತೆಗೆ ಉತ್ತರ ನೀಡಲಿ ಎಂದರು. ಸುದ್ದಿಗೋಷ್ಠಿಯಲ್ಲಿ ಎ.ಸಿ.ಭಂಡಾರಿ, ಉಮೇಶ್ಚಂದ್ರ, ಮಹಾಬಲ ಮಾರ್ಲ, ಪುರುಷೋತ್ತಮ ಚಿತ್ರಾಪುರ, ಕುಂಞಿಮೋನು, ಟಿ.ಕೆ.ಸುಧೀರ್, ಫಾರೂಕ್ ಉಳ್ಳಾಲ್, ಬಾಲಕೃಷ್ಣ ಶೆಟ್ಟಿ, ರಾಧಾಕೃಷ್ಣ, ಕವಿತಾ ವಾಸು, ಶಶಿರಾಜ್ ಅಂಬಟ್, ದೀಪಕ್ ಪೂಜಾರಿ, ಹಿಲ್ಡಾ ಆಳ್ವಾ, ರಮಾನಂದ ಪೂಜಾರಿ, ಕಮಾಲಾಕ್ಷ ಸಾಲ್ಯಾನ್, ಸರಳಾ ಕರ್ಕೇರ, ಈಶ್ವರ ಉಳ್ಳಾಲ್, ಕರುಣಾಕರ ಶೆಟ್ಟಿ, ಅಪ್ಪಿ ಮತ್ತಿತರರು ಉಪಸ್ಥಿತರಿದ್ದರು.







