ಗ್ರಾಮ ರೈತ ಸಂಪರ್ಕ ಕಾರ್ಯಕ್ರಮಕ್ಕೆ ಚಿಂತನೆ: ಸೊರಕೆ : ಹೇರೂರಿನಲ್ಲಿ ಗ್ರಾಮ ವಿಕಾಸ ಯೋಜನೆ ಉದ್ಘಾಟನೆ

ಉಡುಪಿ, ಮಾ.12: ರೈತರ ಸಮಸ್ಯೆಗಳನ್ನು ಪರಿಹರಿಸುವ ದೃಷ್ಟಿಯಿಂದ ರೈತರ ಮನೆ ಬಾಗಿಲಿಗೆ ತೆರಳಿ ಅಗತ್ಯ ಸಾಲ ಸೌಲಭ್ಯಗಳನ್ನು ವಿತರಿಸುವ ವಿನೂತನ ‘ಗ್ರಾಮ ರೈತ ಸಂಪರ್ಕ’ ಕಾರ್ಯಕ್ರಮ ಜಾರಿಗೆ ಚಿಂತನೆ ನಡೆದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದ್ದಾರೆ.
ಕಾಪು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಜೂರು ಗ್ರಾಪಂ ವ್ಯಾಪ್ತಿಯ ಹೇರೂರಿನಲ್ಲಿ ಶನಿವಾರ ಗ್ರಾಮ ವಿಕಾಸ ಯೋಜನೆ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಗ್ರಾಮ ವಿಕಾಸ ಯೋಜನೆಯಲ್ಲಿ ಜಿಲ್ಲೆಯಲ್ಲಿ ಅತ್ಯಂತ ಹಿಂದುಳಿದ ಗ್ರಾಮಗಳನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ 75ಲಕ್ಷ ರೂ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು. ಜಿಲ್ಲೆಯ ಪ್ರತಿ ವಿಧಾನಸಭಾ ಕ್ಷೇತ್ರದ 5 ಗ್ರಾಮಗಳಲ್ಲಿ ಈ ಯೋಜನೆ ಅನುಷ್ಠಾನಗೊಳ್ಳಲಿದ್ದು, ಕಾಪು ವಿಧಾನ ಸಭಾ ಕ್ಷೇತ್ರದಲ್ಲಿ ಹೇರೂರು ಸೇರಿದಂತೆ 5 ಗ್ರಾಮಗಳಲ್ಲಿ ಈ ಯೋಜನೆ ಅನುಷ್ಠಾನಗೊಳ್ಳಲಿದೆ ಎಂದರು.
ಕರಾವಳಿ ಭಾಗದ ಗ್ರಾಮಗಳಲ್ಲಿ ಸಂಗ್ರಹವಾಗುವ ಕಸ ವಿಲೇವಾರಿಗೆ ಸೂಕ್ತ ವ್ಯವಸ್ಥೆ ಇಲ್ಲವಾದ್ದರಿಂದ ಕಸ ವಿಲೇವಾರಿಗಾಗಿ ಈಗಾಗಲೇ ಎಲ್ಲೂರಿನಲ್ಲಿ 10 ಎಕ್ರೆ ಜಾಗವನ್ನು ಗುರುತಿಸಲಾಗಿದೆ. ಇಲ್ಲಿ ತ್ಯಾಜ್ಯ ಸಂಸ್ಕರಣಾ ಘಟಕದ ಪ್ರಾರಂಭಕ್ಕೆ 5 ಕೋ.ರೂ ಬಿಡುಗಡೆಯಾಗಿದ್ದು, ಶೀಘ್ರ ಕಾಮಗಾರಿ ಆರಂಭಗೊಳ್ಳಲಿದೆ ಎಂದು ಸೊರಕೆ ತಿಳಿಸಿದರು. ಇದಕ್ಕೂ ಮುನ್ನ ಸಚಿವರು 30 ಲಕ್ಷ ರೂ. ವೆಚ್ಚದಲ್ಲಿ ಜಲಂಚಾರು ಶ್ರೀ ಮಹಾಗಣಪತಿ ದೇವಸ್ಥಾನದ ಹಿಂಬದಿ ಪಾಪನಾಶಿನಿ ಹೊಳೆಗೆ ನಿರ್ಮಿಸಿದ್ದ ಸಂರಕ್ಷಣಾ ಕಾಮಗಾರಿಯನ್ನು ಉದ್ಘಾಟಿಸಿದರು. ಸಮಾರಂಭದಲ್ಲಿ 7 ಮಂದಿಗೆ ಭಾಗ್ಯಲಕ್ಷ್ಮಿ ಬಾಂಡ್‌ಗಳನ್ನು ವಿತರಿಸಿದರು.
ಮಜೂರು ಗ್ರಾಪಂ ಅಧ್ಯಕ್ಷ ಸಂದೀಪ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಸಹನಾ ತಂತ್ರಿ, ತಾಪಂ ಸದಸ್ಯೆ ಶಶಿಪ್ರಭಾ ಶೆಟ್ಟಿ, ಗ್ರಾಪಂ ಒಕ್ಕೂಟದ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ಮಜೂರು ಗ್ರಾಪಂ ಸದಸ್ಯರು, ಉಡುಪಿ ತಾಪಂ ಇಒ ಜನಾರ್ದನ ಮತ್ತಿತರರು ಉಪಸ್ಥಿತರಿದ್ದರು. ಗ್ರಾಪಂ ಸದಸ್ಯ ಗಣೇಶ್ ಶೆಟ್ಟಿ ಸ್ವಾಗತಿಸಿದರು. ಪಿಡಿಒ ಪ್ರತಾಪ್‌ಚಂದ್ರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಬಿಪಿಎಲ್ ಪಡಿತರ ಚೀಟಿಗಳು 480 ರೂ.ಗಿಂತ ಹೆಚ್ಚಿನ ವಿದ್ಯುತ್ ಬಿಲ್ ಬಂದ ಕಾರಣ ರದ್ದಾಗಿದ್ದು, ಹೆಚ್ಚಿನ ವಿದ್ಯುತ್ ಬಿಲ್‌ನಿಂದ ರದ್ದಾಗಿರುವ ಬಿಪಿಎಲ್ ಕುಟುಂಬಗಳಿಂದ ಪುನರ್ ಪರಿಶೀಲನಾ ಅರ್ಜಿಗಳನ್ನು ಪಡೆದು, ಪುನರ್ ವಿಮರ್ಶೆ ಮಾಡಿ ಕಾರ್ಡ್ ನೀಡುವಂತೆ ಅಧಿಕಾರಿಗಳಿಗೆ ಈಗಾಗಲೇ ಸೂಚಿಸಲಾಗಿದೆ. ಬಿಪಿಎಲ್ ಚೀಟಿ ರದ್ದುಗೊಂಡಿರುವವರು ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿ.
-ವಿನಯಕುಮಾರ್ ಸೊರಕೆ, ಸಚಿವರು.







