‘ಎತ್ತಿನಹೊಳೆ ಹೆಸರಲ್ಲಿ ಜನರ ಮನಸ್ಸು ಒಡೆಯದಿರಿ’

ಉಡುಪಿ, ಮಾ.12: ರಾಜ್ಯ ಸರಕಾರ ಎತ್ತಿನಹೊಳೆ ಯೋಜನೆಯ ಮೂಲಕ ಕರಾವಳಿ ಹಾಗೂ ಬಯಲು ಪ್ರದೇಶಗಳ ಜನರ ಮಧ್ಯೆ ಸಂಘರ್ಷ ಉಂಟು ಮಾಡುತ್ತಿದೆ. ಈ ಯೋಜನೆಯಿಂದ ಯಾವುದೇ ಪ್ರದೇಶಕ್ಕೆ ಹಾನಿಯಾಗದಂತೆ ಹಾಗೂ ಜನರ ಮನಸ್ಸುಗಳನ್ನು ಒಡೆಯದಂತೆ ನೋಡಿಕೊಳ್ಳುವುದು ಸರಕಾರದ ಜವಾಬ್ದಾರಿಯಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣ ಗೌಡ ಹೇಳಿದ್ದಾರೆ.
ಕರ್ನಾಟಕ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಘಟಕದ ವತಿಯಿಂದ ಶನಿವಾರ ಉಡುಪಿ ಬ್ರಹ್ಮಗಿರಿ ಲಯನ್ಸ್ ಭವನದಲ್ಲಿ ಜಿಲ್ಲಾ ಕಾರ್ಯಕರ್ತರ ಚಿಂತನಾ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಕರವೇ ರಾಜ್ಯ ಉಪಾಧ್ಯಕ್ಷ ಆಂಜನಪ್ಪ, ಬೆಂಗಳೂರು ನಗರ ಜಿಲ್ಲಾಧ್ಯಕ್ಷ ಕೆ.ಸತೀಶ್, ದ.ಕ. ಜಿಲ್ಲಾಧ್ಯಕ್ಷ ಅನಿಲ್ ದಾಸ್, ಉಡುಪಿ ಜಿಲ್ಲಾಧ್ಯಕ್ಷ ಎಸ್.ಆರ್.ಲೋಬೊ, ಮಹಿಳಾ ಘಟಕದ ರಾಜ್ಯ ಉಪಾಧ್ಯಕ್ಷೆ ಅಶ್ವಿನಿ ಗೌಡ, ರಾಜ್ಯ ಕಾರ್ಯದರ್ಶಿ ಸಾರಿಕಾ, ರಾಜ್ಯ ಸಂಚಾಲಕಿ ಪ್ರಾಚಿ, ಮುಖಂಡರಾದ ಬಸವ ರಾಜ ಪಡುಕೋಟೆ, ಶಂಕರಗೌಡ ಪಾಟೀಲ್, ಸಂಗೀತ ಶಿವಮೊಗ್ಗ ಮೊದ ಲಾದವರು ಉಪಸ್ಥಿತರಿದ್ದರು.
ಜಿಲ್ಲಾ ಉಸ್ತುವಾರಿ ಜಗದೀಶ್ ಅರಸ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯು.ಸುರೇಶ್ ಶೇಟ್ ಸ್ವಾಗತಿಸಿದರು. ಸ್ಟೀವನ್ ಕೊಲಾಸೊ ಕಾರ್ಯಕ್ರಮ ನಿರೂಪಿಸಿದರು.







