ಭಾರತದ ಭವಿಷ್ಯ ಉಜ್ವಲವಾಗಿದೆ: ಲಗಾರ್ಡ್

ಹೊಸದಿಲ್ಲಿ, ಮಾ.12: ದೇಶದಲ್ಲಿಯ ನಿರಂತರ ಸುಧಾರಣಾ ಪ್ರಕ್ರಿಯೆಯನ್ನು ಶನಿವಾರ ಇಲ್ಲಿ ಪ್ರಶಂಸಿಸಿದ ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್)ಯ ಆಡಳಿತ ನಿರ್ದೇಶಕಿ ಕ್ರಿಸ್ಟಿನ್ ಲಗಾರ್ಡ್ ಅವರು, ಜಾಗತಿಕ ಆರ್ಥಿಕ ಸವಾಲುಗಳ ನಡುವೆಯೂ ಭಾರತದ ಭವಿಷ್ಯ ಉಜ್ವಲವಾಗಿದೆ ಮತ್ತು ನಿಧಾನ ಗತಿಯ ಹೊರತಾಗಿಯೂ ಮುಂದಿನ ನಾಲ್ಕು ವರ್ಷಗಳಲ್ಲಿ ವಿಶ್ವಾದ್ಯಂತ ಬೆಳವಣಿಗೆಯ ಸುಮಾರು ಮೂರನೆ ಎರಡರಷ್ಟನ್ನು ಕೊಡುಗೆಯಾಗಿ ನೀಡುವ ಸಾಮರ್ಥ್ಯ ಹೊಂದಿದೆ ಎಂದು ಹೇಳಿದರು.
ವಿಶ್ವದಲ್ಲಿಯೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿರುವ ಭಾರತವು ಈವರೆಗಿನ ಅತ್ಯಂತ ದೊಡ್ಡ ಯುವ ಕಾರ್ಯಪಡೆಯನ್ನು ಹೊಂದಲು ಸಜ್ಜಾಗಿದ್ದು, ಇನ್ನೊಂದು ದಶಕದಲ್ಲಿ ವಿಶ್ವದಲ್ಲಿ ಅತ್ಯಂತ ಹೆಚ್ಚಿನ ಜನಸಂಖ್ಯೆಯ ದೇಶವಾಗಲಿದೆ ಎಂದರು.
ಹೀಗಾಗಿ ಭಾರತವಿಂದು ಪರಿವರ್ತನೆಯ ಅಭೂತಪೂರ್ವ ಅವಕಾಶದೊಂದಿಗೆ ತನ್ನ ಇತಿಹಾಸದಲ್ಲಿ ನಿರ್ಣಾಯಕ ಘಳಿಗೆಯ ಹೊಸ್ತಿಲಿನಲ್ಲಿದೆ ಎಂದರು.
ವಿತ್ತ ಸಚಿವಾಲಯ ಮತ್ತು ಐಎಂಎಫ್ ಇಲ್ಲಿ ಆಯೋಜಿಸಿದ ‘ಅಡ್ವಾನ್ಸಿಂಗ್ ಏಷ್ಯಾ’ಸಮ್ಮೇಳನದಲ್ಲಿ ಮಾತನಾಡುತ್ತಿದ್ದ ಅವರು,ಮೇಕ್ ಇನ್ ಇಂಡಿಯಾ ಮತ್ತು ಡಿಜಿಟಲ್ ಇಂಡಿಯಾದಂತಹ ಪ್ರಮುಖ ಸುಧಾರಣೆಗಳು ಈಗಾಗಲೇ ಆರಂಭಗೊಂಡಿವೆ. ಇನ್ನಷ್ಟು ಹೆಚ್ಚಿನ ಸುಧಾರಣೆಗಳು ಬರುವ ಭರವಸೆಯೊಂದಿಗೆ ಭಾರತದ ಭವಿಷ್ಯವು ಉಜ್ವಲವಾಗಿದೆ ಎಂದು ಹೇಳಿದರು.
ಐಎಂಎಫ್‌ನೊಂದಿಗೆ ಭಾರತದ 70 ವರ್ಷಗಳ ಸುದೀರ್ಘ ಒಡನಾಟವನ್ನು ಸ್ಮರಿಸಿಕೊಂಡ ಲಗಾರ್ಡ್ ಅವರು,ಏಷ್ಯಾ ವಿಶ್ವದ ಅತ್ಯಂತ ಚೈತನ್ಯಪೂರ್ಣ ಪ್ರದೇಶವಾಗಿದ್ದು,ಇಂದು ಜಾಗತಿಕ ಆರ್ಥಿಕತೆಯಲ್ಲಿ ಶೇ.40ರಷ್ಟು ಪಾಲನ್ನು ಹೊಂದಿದೆ ಎಂದರು.







