ಐಐಪಿ ಅಂಕಿ-ಅಂಶಗಳು ನಿರಾಶಾದಾಯಕ: ರಾಜನ್

ಹೊಸದಿಲ್ಲಿ, ಮಾ.12: ಕೈಗಾರಿಕಾ ಉತ್ಪಾದನಾಸೂಚಿ(ಐಐಪಿ)ಯ ಅಂಕಿ ಅಂಶಗಳು ನಿರಾಶಾದಾಯಕವಾಗಿವೆ ಎಂದು ಶನಿವಾರ ಇಲ್ಲಿ ಬಣ್ಣಿಸಿದ ಆರ್‌ಬಿಐ ಗವರ್ನರ್ ರಘುರಾಮ ರಾಜನ್ ಅವರು, ಆರ್ಥಿಕತೆಯೇನೋ ಚೇತರಿಸಿಕೊಳ್ಳುತ್ತಿದೆ, ಆದರೆ ಈ ಚೇತರಿಕೆ ಪ್ರಕ್ರಿಯೆ ಏರಿಳಿತಗಳಿಂದ ಕೂಡಿದೆ ಎಂದು ಹೇಳಿದರು.
ಆರ್‌ಬಿಐ ಮಂಡಳಿ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘‘ನಾವು ಚೇತರಿಸಿಕೊಳ್ಳುತ್ತಿದ್ದೇವೆ. ನಾನು ಹಿಂದೆಯೂ ಇದನ್ನು ಹೇಳಿದ್ದೆ. ಈಗಲೂ ಇದನ್ನೇ ಹೇಳುತ್ತಿದ್ದೇನೆ. ಆದರೆ ಇದು ಸುಸ್ಥಿರತೆಯಿಂದ ಕೂಡಿಲ್ಲ, ಎಲ್ಲ ಸಂಕೇತಗಳೂ ಒಂದೇ ದಿಕ್ಕಿನಲ್ಲಿವೆ. ಶುಕ್ರವಾರ ಬಿಡುಗಡೆಗೊಂಡ ಐಐಪಿ ಅಂಕಿಅಂಶಗಳು ನಿರಾಶಾದಾಯಕವಾಗಿವೆ.
ಆದರೆ ಒಟ್ಟಾರೆಯಾಗಿ ಆರ್ಥಿಕತೆಯು ಪ್ರಗತಿಯನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ಸಾಗುತ್ತಿದೆ’’ ಎಂದರು. ದೇಶದ ಕೈಗಾರಿಕಾ ರಂಗದ ಉತ್ಪಾದನೆ ಸತತ ಮೂರು ತಿಂಗಳುಗಳಿಂದ ಕುಸಿತದ ಹಾದಿಯಲ್ಲಿಯೇ ಇದ್ದು,ತಯಾರಿಕೆ ಮತ್ತು ಬಂಡವಾಳ ಸರಕುಗಳ ಕ್ಷೇತ್ರದಲ್ಲಿ ಕಳಪೆ ಪ್ರದರ್ಶನದಿಂದಾಗಿ ಐಐಪಿ ಕಳೆದ ಜನವರಿಯಲ್ಲಿ ಶೇ.1.5ರಷ್ಟು ಕುಸಿದಿದೆ. ಈ ಹಿನ್ನೆಲೆಯಲ್ಲಿ ಬಡ್ಡಿ ದರ ಕಡಿತ ಮಾಡುವಂತೆ ಕೈಗಾರಿಕಾ ರಂಗವು ಆರ್‌ಬಿಐನ್ನು ಒತ್ತಾಯಿಸಿದೆ.ಬ್ಯಾಂಕು ತನ್ನ ಹಣಕಾಸು ನೀತಿಯನ್ನು ಎ.15ರಂದು ಪ್ರಕಟಿಸಲಿದೆ.
ಪ್ರಗತಿಯನ್ನು ಉತ್ತೇಜಿಸಲು ಹಣಕಾಸು ಕ್ರೋಡೀಕರಣದ ಮಾರ್ಗದಲ್ಲಿ ಮುಂದುವರಿಯುವ ಮತ್ತು ಹಣಕಾಸು ನೀತಿಯನ್ನು ಸಡಿಲಗೊಳಿಸುವ ಸರಕಾರದ ನಿಲುವನ್ನು ಆರ್‌ಬಿಐ ಪರಿಗಣಿಸಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ರಾಜನ್,ಪ್ರಸಕ್ತ ವರ್ಷದಲ್ಲಿ ಶೇ.3.5 ವಿತ್ತೀಯ ಕೊರತೆಯ ಗುರಿಯು ಹಣಕಾಸು ಕ್ರೋಡೀಕರಣದ ಸರಕಾರದ ಉದ್ದೇಶಕ್ಕೆ ಸ್ಪಷ್ಟ ಸಂಕೇತವಾಗಿದೆ ಎಂದರು. ಮಾರುಕಟ್ಟೆ ಮತ್ತು ಆರ್‌ಬಿಐ ಇದನ್ನು ಸ್ವಾಗತಿಸಿವೆ. ಹಣಕಾಸು ನೀತಿ ಇದನ್ನು ಹೇಗೆ ಅಳವಡಿಸಿಕೊಳ್ಳುತ್ತದೆ ಎನ್ನುವು ದನ್ನು ಕಾದು ನೋಡಬೇಕಾಗಿದೆ ಎಂದು ಅವರು ಹೇಳಿದರು.







