ಏಳಿಗೆ ಹೊಂದಲು ಸಮಾನ ಅವಕಾಶ ನೀಡುವ ಶಿಕ್ಷಣ ವ್ಯವಸ್ಥೆ ರೂಪಿಸಿ
ಸರಕಾರಕ್ಕೆ ಜಾಗತಿಕ ಶಿಕ್ಷಕ ಪ್ರಶಸ್ತಿಯ ಸಂಭಾವ್ಯ ವಿಜೇತೆ ಕರೆ

ದುಬೈ, ಮಾ. 12: ಪ್ರತಿಯೊಬ್ಬರೂ ಯಶಸ್ವಿಯಾಗಲು ಅವಕಾಶ ನೀಡುವ ನೂತನ ಶಿಕ್ಷಣ ವ್ಯವಸ್ಥೆಯೊಂದನ್ನು ರೂಪಿಸುವಂತೆ ಭಾರತೀಯ ಶಿಕ್ಷಕಿ ರಾಬಿನ್ ಚೌರಾಸಿಯ ಇಂದು ಭಾರತ ಸರಕಾರಕ್ಕೆ ಕರೆ ನೀಡಿದ್ದಾರೆ.
ಒಂದು ಮಿಲಿಯ ಡಾಲರ್ (ಸುಮಾರು 6.7 ಕೋಟಿ ರೂಪಾಯಿ) ಪ್ರಶಸ್ತಿ ಮೊತ್ತದ ಜಾಗತಿಕ ಶಿಕ್ಷಕ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿರುವವರ ಕಿರುಪಟ್ಟಿಯಲ್ಲಿ ಚೌರಾಸಿಯ ಸ್ಥಾನ ಪಡೆದಿದ್ದಾರೆ ಎಂಬುದನ್ನು ಸ್ಮರಿಸಬಹುದಾಗಿದೆ.
‘‘ಶಿಕ್ಷಣದ ಉದ್ದೇಶ ಜನರನ್ನು ದಮನಿಸುವುದಲ್ಲ, ಈಗ ಅಸ್ತಿತ್ವದಲ್ಲಿರುವ ಹಾಗೂ ಭಾರತದ ಹಿನ್ನಡೆಗೆ ಕಾರಣವಾಗಿರುವ ವ್ಯವಸ್ಥೆಯನ್ನು ಮುನ್ನಡೆಸುವುದಲ್ಲ ಹಾಗೂ ಈಗಾಗಲೇ ಅಸ್ತಿತ್ವದಲ್ಲಿರುವ ದಮನಕಾರಕ ವ್ಯವಸ್ಥೆಯನ್ನು ಮರು ನಿರ್ಮಿಸುವುದಲ್ಲ. ಏಳಿಗೆ ಹೊಂದಲು ಎಲ್ಲರಿಗೂ ಅವಕಾಶ ನೀಡುವ ನೂತನ ವ್ಯವಸ್ಥೆಯೊಂದನ್ನು ನಾವು ತುರ್ತಾಗಿ ನಿರ್ಮಿಸಬೇಕಾಗಿದೆ.’’ ಎಂದು ಮುಂಬೈಯ ‘ಕ್ರಾಂತಿ ಸ್ಕೂಲ್’ನ ಸ್ಥಾಪಕಿ ಚೌರಾಸಿಯ ಹೇಳಿದರು.
ಅವರು ಮುಂಬೈಯ ಕೆಂಪು ದೀಪದ ಪ್ರದೇಶಗಳ ಬಾಲಕಿಯರಿಗಾಗಿ ಮುಂಬೈಯಲ್ಲಿ ಲಾಭರಹಿತ ಶಾಲೆಯೊಂದನ್ನು ನಡೆಸುತ್ತಿದ್ದಾರೆ. ಲಂಡನ್‌ನ ವಾರ್ಕಿ ಫೌಂಡೇಶನ್ ಪ್ರಾಯೋಜಿತ ಜಾಗತಿಕ ಶಿಕ್ಷಕ ಪ್ರಶಸ್ತಿ ನಾಮನಿರ್ದೇಶಿತರ ಅಂತಿಮ 10ರ ಪಟ್ಟಿಯಲ್ಲಿ ಇರುವ ಏಕೈಕ ಭಾರತೀಯ ವ್ಯಕ್ತಿ ಅವರಾಗಿದ್ದಾರೆ. ದುಬೈಯಲ್ಲಿ ರವಿವಾರ ನಡೆಯಲಿರುವ ವಾರ್ಷಿಕ ಜಾಗತಿಕ ಶಿಕ್ಷಣ ಮತ್ತು ನೈಪುಣ್ಯ ವೇದಿಕೆ (ಜಿಇಎಸ್‌ಎಫ್)ಯಲ್ಲಿ ಪ್ರಶಸ್ತಿಯನ್ನು ಘೋಷಿಸಲಾಗುವುದು.
ಒಂದು ವೇಳೆ ನೀವು ಈ ಬೃಹತ್ ಮೊತ್ತದ ಪ್ರಶಸ್ತಿಯನ್ನು ಗೆದ್ದರೆ ಮುಂದಿನ ಯೋಜನೆ ಏನು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಬ್ರಿಟನ್, ಅಮೆರಿಕ, ನೈರೋಬಿ, ಫೆಲೆಸ್ತೀನ್, ಜಪಾನ್, ಫಿನ್‌ಲ್ಯಾಂಡ್, ಆಸ್ಟ್ರೇಲಿಯ ಮತ್ತು ಪಾಕಿಸ್ತಾನಗಳ ನನ್ನ ಸಹ ನಾಮನಿರ್ದೇಶಿತರೊಂದಿಗೆ ಪ್ರಶಸ್ತಿ ಹಣವನ್ನು ಹಂಚಿಕೊಳ್ಳುತ್ತೇನೆ ಎಂದರು.ಕ್ರಾಂತಿ ಸ್ಕೂಲ್‌ನಲ್ಲಿ 12ರಿಂದ 21 ವರ್ಷಗಳವರೆಗಿನ 18 ಬಾಲಕಿಯರು ಕಲಿಯುತ್ತಿದ್ದಾರೆ. ಮುಂಬೈಯ ಇತರ ಕೆಂಪು ದೀಪ ಪ್ರದೇಶಗಳಿಗೂ ಶಾಲೆಯ ವ್ಯಾಪ್ತಿಯನ್ನು ವಿಸ್ತರಿಸುವ ಯೋಜನೆಯನ್ನು ಅದು ಹೊಂದಿದೆ. ಶಾಲೆಯ ವಿಶಿಷ್ಟ ಪಠ್ಯಕ್ರಮವನ್ನು ದೇಶಾದ್ಯಂತ ಜಾರಿಗೆ ತರುವ ನಿಟ್ಟಿನಲ್ಲಿ ಅದು ಕೆಲಸ ಮಾಡುತ್ತಿದೆ.
‘‘ಸದ್ಯಕ್ಕೆ ನಾವು ಮನೆಯಲ್ಲೇ ಕೆಲಸ ಮಾಡುತ್ತಿದ್ದೇವೆ. ನಮ್ಮಲ್ಲಿ 18 ಬಾಲಕಿಯರಿದ್ದಾರೆ. ಆದರೆ, ನಮಗೆ ಸೂಕ್ತ ಶಾಲೆಯೊಂದು ಬೇಕು. ಪಠ್ಯಕ್ರಮ ಸಿದ್ಧವಿದೆ, ಎಲ್ಲವೂ ತಯಾರಿದೆ. ನಾವು ಮುಂದೆ ಹೆಚ್ಚಿನ ವಿದ್ಯಾರ್ಥಿಗಳನ್ನು ಹೊಂದುತ್ತೇವೆ ಎಂದರು. ಸನ್ನಿ ವಾರ್ಕಿ ಎಂಬ ಕೇರಳ ಸಂಜಾತ ಉದ್ಯಮಿ ಈ ಪ್ರಶಸ್ತಿಯನ್ನು ಸ್ಥಾಪಿಸಿದ್ದಾರೆ. ಪ್ರಶಸ್ತಿಯನ್ನು ಶಿಕ್ಷಕರ ಆಸ್ಕರ್ ಪ್ರಶಸ್ತಿ ಎಂಬಂತೆ ಕಳೆದ ವರ್ಷ ಆರಂಭಿಸಲಾಗಿತ್ತು.





