ಪೊಲೀಸರಿಂದ ನಟ ದರ್ಶನ್ ವಿಚಾರಣೆ

ಬೆಂಗಳೂರು, ಮಾ.12: ಚಿತ್ರನಟ ದರ್ಶನ್, ಪತ್ನಿ ವಿಜಯಲಕ್ಷ್ಮೀಗೆ ಬೆದರಿಕೆ ಹಾಕಿದ ದೂರಿನ ಹಿನ್ನೆಲೆಯಲ್ಲಿ ಶನಿವಾರ ಇಲ್ಲಿನ ತ್ಯಾಗರಾಜನಗರದ ಬನಶಂಕರಿ ಎಸಿಪಿ ಕಚೇರಿಗೆ ಖುದ್ದು ಭೇಟಿ ನೀಡಿ ಮಾ.9ರಂದು ನಡೆದ ಘಟನೆಗಳ ಬಗ್ಗೆ ವಿವರಣೆ ನೀಡಿದ್ದಾರೆ.
ಉಪ ಪೊಲೀಸ್ ಆಯುಕ್ತ ಲೋಕೇಶ್ ಕುಮಾರ್ ಅವರ ಸೂಚನೆ ಹಿನ್ನೆಲೆಯಲ್ಲಿ ತ್ಯಾಗರಾಜನಗರದ ಬನಶಂಕರಿ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ (ಎಸಿಪಿ) ಕಚೇರಿಗೆ ಬೆಳಗ್ಗೆ 11:30ರ ಸುಮಾರಿಗೆ ತೆರಳಿದ ದರ್ಶನ್ ಘಟನೆಯ ಬಗ್ಗೆ ಸಮಜಾಯಿಷಿ ನೀಡಿದ್ದಾರೆ ಎಂದು ಗೊತ್ತಾಗಿದೆ.
ಪತ್ನಿ ಮತ್ತು ಪುತ್ರನ ಓಡಾಟಕ್ಕಾಗಿ ತಾನು ನೀಡಿರುವ ಕಾರು ಅನ್ಯವ್ಯಕ್ತಿ ಬಳಕೆ ಮಾಡುತ್ತಿದ್ದು, ಆ ಬಗ್ಗೆ ವಿಚಾರಿಸಲು ಮಾ.9ರಂದು ತಾನು ಇಲ್ಲಿನ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣಾ ವ್ಯಾಪ್ತಿಯ ಕತ್ರಿಗುಪ್ಪೆಯಲ್ಲಿನ ವಸತಿ ಸಮುಚ್ಚಯಕ್ಕೆ ತೆರಳಿದ್ದು ನಿಜ. ಈ ಸಂದರ್ಭದಲ್ಲಿ ಭದ್ರತಾ ಸಿಬ್ಬಂದಿ ತಡೆದ ಹಿನ್ನೆಲೆಯಲ್ಲಿ ಗಲಾಟೆ ಆಗಿತ್ತು. ಆದರೆ, ಯಾರೊಬ್ಬರ ಮೇಲೆಯೂ ತಾನು ಹಲ್ಲೆ ನಡೆಸಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ತನಿಖಾಧಿಕಾರಿ ಎಸ್ಸೈ ಕುಮಾರ ಸ್ವಾಮಿ,ದರ್ಶನ್ ಪತ್ನಿ ವಿಜಯಲಕ್ಷ್ಮೀ ಹಾಗೂ ಭದ್ರತಾ ಸಿಬ್ಬಂದಿ ದೇವರಾಜ್ ನೀಡಿರುವ ದೂರಿನ ಹಿನ್ನೆಲೆಯಲ್ಲಿ ದರ್ಶನ್‌ರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಲಾಗುವುದು. ಅಗತ್ಯ ಬಿದ್ದರೆ ಕೆಲ ಸ್ಪಷ್ಟನೆಗಳನ್ನು ನೀಡಲು ದರ್ಶನ್ ಮತ್ತೊಮ್ಮೆ ಠಾಣೆಗೆ ಬರಬೇಕಾಗುತ್ತದೆ ಎಂದು ಹೇಳಿ ಅವರನ್ನು ಕಳುಹಿಸಿದ್ದಾರೆಂದು ಗೊತ್ತಾಗಿದೆ.
ಅಭಿಮಾನಿಗಳ ದಂಡು: ಪೊಲೀಸ್ ವಿಚಾರಣೆಗೆ ನಟ ದರ್ಶನ್ ಹಾಜರಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಇಲ್ಲಿನ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯ ಬಳಿ ಅವರ ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ಸೇರಿದ್ದರು. ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.
ಈ ಮಧ್ಯೆಯೇ ವಸತಿ ಸಚಿವರೂ ಆಗಿರುವ ನಟ ಅಂಬರೀಶ್, ನಟ ದರ್ಶನ್ ಮತ್ತು ವಿಜಯಲಕ್ಷ್ಮೀ ದಂಪತಿ ನಡುವೆ ಮಧ್ಯಸ್ಥಿಕೆ ವಹಿಸಿದ್ದು, ದಂಪತಿಯ ಜೊತೆ ಮಾತುಕತೆ ನಡೆಸಲಿದ್ದಾರೆಂದು ಹೇಳಲಾಗಿದೆ. ಆ ಹಿನ್ನೆಲೆಯಲ್ಲಿ ನಟ ದರ್ಶನ್ ಪೊಲೀಸರ ವಿಚಾರಣೆ ಬಳಿಕ ಜೆಪಿ ನಗರದಲ್ಲಿನ ನಟ ಅಂಬರೀಶ್ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿದರು.
ಈ ಪ್ರಕರಣ ಸಂಬಂಧ ಚೆನ್ನಮ್ಮನಕೆರೆ ಅಚ್ಚುಕಟ್ಟು ಠಾಣಾ ಪೊಲೀಸರು ಮೊಕದ್ದಮೆ ದಾಖಲು ಮಾಡಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.







