ಪ್ರೇಯಸಿ ಮನೆಗೆ ಬೆಂಕಿ: ಆರೋಪಿ ಬಂಧನ
ಬೆಂಗಳೂರು, ಮಾ. 12: ಪ್ರೇಯಸಿಯ ಪೋಷಕರು ಮದುವೆಗೆ ನಿರಾಕರಿಸಿದ್ದಕ್ಕೆ ಪ್ರೇಮಿಯೊಬ್ಬ ಆಕೆಯ ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಆರೋಪದಲ್ಲಿ ವ್ಯಕ್ತಿಯೊಬ್ಬನನ್ನು ಇಲ್ಲಿನ ಶ್ರೀರಾಂಪುರ ಠಾಣಾ ಪೋಲಿಸರು ಬಂಧಿಸಿದ್ದಾರೆ. ಪ್ರೇಯಸಿಯ ಮನೆಗೆ ಬೆಂಕಿ ಹಚ್ಚಿದ ಆರೋಪಿಯನ್ನು ದೀಪಕ್(22) ಎಂದು ಗುರುತಿಸಲಾಗಿದೆ.
ಈತ ಶ್ರೀರಾಂಪುರದ ಸಾಯಿಬಾಬಾ ನಗರದಲ್ಲಿರುವ ಪ್ರೇಯಸಿ ಮೇಘಾನಾ ಎಂಬಾಕೆಯ ನಿವಾಸಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ ಎಂದು ಹೇಳಲಾಗುತ್ತಿದೆ.
ಘಟನೆಯಲ್ಲಿ ಮನೆಯಲ್ಲಿದ್ದ ಪ್ರೇಯಸಿ ಮೇಘನಾ, ತಂದೆ ನಟರಾಜು, ತಾಯಿ ಅನುಪಮಾ ಹಾಗೂ ತಂಗಿ ಸಂಜನಾ ಎಂಬವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಒಂದೇ ಕಾಲೇಜಿನಲ್ಲಿ ದೀಪಕ್ ಮತ್ತು ಮೇಘನಾ ಓದುತ್ತಿದ್ದು, ನಾಲ್ಕು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಒಂದು ವರ್ಷದ ಹಿಂದೆ ಇಬ್ಬರೂ ಮನೆ ಬಿಟ್ಟು ಹೋಗಿದ್ದರು. ಇತ್ತೀಚೆಗೆ ಇವರಿಬ್ಬರ ಮದುವೆಗೆ ಪೋಷಕರು ನಿರಾಕರಿಸಿದ್ದರು. ಇದರಿಂದ ಸಿಟ್ಟಿಗೆದ್ದ ಯುವಕ ಯುವತಿಯ ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ ಎಂದು ತಿಳಿದು ಬಂದಿದೆ.
ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





