ವೈದ್ಯರು ಸೇವಾ ಮನೋಭಾವದಿಂದ ಕೆಲಸ ಮಾಡಲಿ: ಡಾ.ಜಿ.ಪರಮೇಶ್ವರ್
ಹೊಸಕೋಟೆ, ಮಾ. 12: ವೈದ್ಯರು ಸಮಾಜ ಸೇವೆಯ ಮನೋಭಾವದಿಂದ ಕೆಲಸ ಮಾಡುವ ಜೊತೆಗೆ ರೋಗಿಯ ನಂಬಿಕೆ ಗಳಿಸಲು ಮುಂದಾಗಬೇಕೆಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ನಗರದ ಎಂವಿಜೆ ವೈದ್ಯಕೀಯ ಕಾಲೇಜು ಹಾಗೂ ರಿಸರ್ಚ್ ಸೆಂಟರ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದ ವೈದ್ಯಕೀಯ ಪದವಿ ಪಡೆದ ಸುಮಾರು 70 ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಪತ್ರ ವಿತರಣಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಆರ್ಥಿಕ, ಸಾಮಾಜಿಕ, ತಂತ್ರಜ್ಞಾನ ಕ್ಷೇತ್ರಗಳಲ್ಲಿ ಭಾರತ ಪ್ರಗತಿ ಸಾಧಿಸುವ ಹಾದಿಯಲ್ಲಿ ಸಾಗುತ್ತಿದೆ. ಈ ವೇಳೆ ನಮ್ಮ ವೈದ್ಯರು ಉತ್ತಮ ಸೇವೆಗೆ ಮುಂದಾಗಬೇಕಿದೆ. ಆಗ ಇನ್ನಷ್ಟು ಬಲಗೊಳ್ಳಲು ಸಹಕಾರಿಯಾಗಲಿದೆ ಎಂದ ಅವರು, ವೈದ್ಯರು ಹಣ ಗಳಿಸುವ ಚಿಂತನೆ ಮಾಡುವುದು ಆಘಾತಕಾರಿ. ರೋಗಿಯು ವೈದ್ಯರಿಗೆ ದೇವರ ಸ್ಥಾನ ನೀಡಿರುತ್ತಾನೆ. ಇದನ್ನು ವೈದ್ಯರು ಮರೆಯಬಾರದೆಂದು ಕಿವಿಮಾತು ಹೇಳಿದರು.
ವೈದ್ಯಕೀಯ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಗೌರವ ಸಲ್ಲಿಸಿ ಸನ್ಮಾನಿಸಲಾಯಿತು. ವೈದ್ಯಕೀಯ ಪದವಿ ಪರೀಕ್ಷೆಯಲ್ಲಿ ಉತ್ತೀರ್ಣರಾದ 70 ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಪತ್ರ ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಪ್ರಸನ್ನ ಸೆಂಟರ್ ಫಾರ್ ಲೈಫ್ ಮ್ಯಾನೇಜ್ ಮೆಂಟ್ ಸಂಸ್ಥಾಪಕ ಸುಖಭೋದಾನಂದ ಸ್ವಾಮಿ, ಕಾಲೇಜು ನಿರ್ದೇಶಕ ಎಂವಿಜೆ ಮೋಹನ್, ಮುಖ್ಯ ಆಡಳಿತಾಧಿಕಾರಿ ಧರಣಿ ಮೋಹನ್, ಕಾಲೇಜು ಶಿಕ್ಷಣ ಮುಖ್ಯಸ್ಥರಾದ ಡಾ.ಟಿ.ಎಸ್ ರಘುರಾಮ್, ಡಾ.ಬಿ.ರವಿಚಂದ್ರ, ಡಾ.ಪ್ರಮೋದ್ ಸೇರಿ ಪ್ರಮುಖರು ಹಾಜರಿದ್ದರು.







