ಆರೆಸ್ಸೆಸ್‌ನಿಂದ ಪಾಠ ಕಲಿಯುವ ಅಗತ್ಯವಿಲ್ಲ: .ಶ್ರೀರಾಮರೆಡ್ಡಿ
ಎನ್.ಕೆ.ಉಪಾಧ್ಯಾಯ ಜನ್ಮ ಶತಮಾನೋತ್ಸವ
ಬೆಂಗಳೂರು, ಮಾ. 12: ಸ್ವಾತಂತ್ರ ಸಂಗ್ರಾಮದಲ್ಲಿ ಬ್ರಿಟಿಷರೊಂದಿಗೆ ಕೈಜೋಡಿಸಿದ್ದ ಆರೆಸ್ಸೆಸ್‌ನಿಂದ ದೇಶಭಕ್ತಿ ಪಾಠ ಕಲಿಯುವ ಅಗತ್ಯ ನಮಗಿಲ್ಲ ಎಂದು ಸಿಪಿಎಂ ಕಾರ್ಯದರ್ಶಿ ಹಾಗೂ ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ಕಿಡಿಕಾರಿದ್ದಾರೆ.
ಶನಿವಾರ ನಗರದ ಎನ್‌ಜಿಒ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಸಂಘ ಏರ್ಪಡಿಸಿದ್ದ ‘ಎನ್.ಕೆ.ಉಪಾಧ್ಯಾಯ’ ಜನ್ಮ ಶತಮಾನೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸ್ವಾತಂತ್ರ ಹೋರಾಟದಲ್ಲಿ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದಇತಿಹಾಸವಿರುವುದು ಕಮ್ಯುನಿಸ್ಟ್‌ರಿಗೆ ಮಾತ್ರ. ಈ ಆರೆಸ್ಸೆಸ್‌ನವರು ಬ್ರಿಟಿಷರೊಂದಿಗೆ ಶಾಮೀಲಾಗಿದ್ದರು. ಅದೇ ರೀತಿ, ಆರೆಸ್ಸೆಸ್ ಸಂಸ್ಥಾಪಕರಲ್ಲಿ ಪ್ರಧಾನರಾದ ವಿನಾಯಕ ದಾಮೋದರ ಸಾವರ್ಕರ್ ಅವರನ್ನು ಸ್ವಾತಂತ್ರ ಹೋರಾಟಕ್ಕಾಗಿ ಅಂಡಮಾನ್ ಜೈಲಿಗೆ ಹಾಕಿದಾಗ ‘ತಮ್ಮನ್ನು ಜೈಲಿಂದ ಬಿಡುಗಡೆಗೊಳಿಸಿದರೆ, ಬ್ರಿಟಿಷ್ ಕಂಪೆನಿ ಸರಕಾರದ ಸೇವಕನಾಗಿರುತ್ತೇನೆ’ ಎಂದು ಮುಚ್ಚಳಿಕೆ ಬರೆದುಕೊಟ್ಟಿರುವುದನ್ನು ಈಗಾಲೂ ಅಂಡಮಾನ್ ಜೈಲಿನ ಇತಿಹಾಸದ ಪುಟಗಳಲ್ಲಿ ನೋಡಬಹುದು ಎಂದು ಹೇಳಿದರು.
ಮಾಜಿ ಪ್ರಧಾನಿ ಅಟಲ್‌ಬಿಹಾರಿ ವಾಜಪೇಯಿ ಸಹ ನಾನು ಸ್ವಾತಂತ್ರ ಹೋರಾಟಗಾರನಲ್ಲ. ನಾನೊಬ್ಬ ದಾರಿ ಹೋಕ ಎಂದು ಪತ್ರದಲ್ಲಿ ಬರೆದುಕೊಟ್ಟಿದ್ದಾರೆ. ಅಲ್ಲದೆ, ಸಂಘಪರಿವಾರ ಮತ್ತು ಬಿಜೆಪಿಯ ಹಿನ್ನಲೆ ಎಲ್ಲರಿಗೂ ತಿಳಿದಿದೆ ಎಂದ ಅವರು, ಕಮ್ಯುನಿಸ್ಟ್‌ನ ಎ.ಕೆ.ಗೋಪಾಲನ್ ಮತ್ತು ಯುವ ಸಮೂಹ 22 ವರ್ಷಗಳ ಕಾಲ ಸ್ವಾತಂತ್ರಕ್ಕಾಗಿ ಜೈಲುವಾಸ ಅನುಭವಿಸಿದವರು ಎಂದು ನೆನಪಿಸಿದರು.
ಇತಿಹಾಸಕಾರರು ಇತಿಹಾಸ ತಿರುಚಿ ಬರೆದಿರುವ ಕಾರಣ ಕಮ್ಯುನಿಸ್ಟ್ ಹೋರಾಟಗಾರರು ಇತಿಹಾಸದ ಪುಟಗಳಲ್ಲಿ ಮರೆಯಾಗಿದ್ದಾರೆ ಎಂದು ಹೇಳಿದ ಶ್ರೀರಾಮರೆಡ್ಡಿ, ಕಾಂಗ್ರೆಸ್‌ನ ಮುಖಂಡರಾದ ನೆಹರೂ, ಗಾಂಧಿ ಅವರನ್ನು ಐಷಾರಾಮಿ ಜೈಲುಗಳಲ್ಲಿಡುತ್ತಿದ್ದರು. ಅದೇ ಬಡ ಮತ್ತು ಕಾರ್ಮಿಕರ ಹೋರಾಟ ಹಿನ್ನಲೆಯಿಂದ ಬಂದ ಕಮ್ಯುನಿಸ್ಟ್‌ರನ್ನು ಮೂಲಸೌಕರ್ಯವಿಲ್ಲದ ಯರವಾಡ, ಪುಣೆ ಜೈಲಿಗೆ ಹಾಕುತ್ತಿದ್ದರು. ಇದರಿಂದ ದೇಶಕ್ಕಾಗಿ ಯಾರು ನಿಜವಾದ ಕೊಡುಗೆ ನೀಡಿದ್ದಾರೆ ಎಂಬುವುದು ತಿಳಿದು ಬರುತ್ತದೆ. ಅಲ್ಲದೆ, ಈ ಆರೆಸ್ಸೆಸ್‌ನವರು ಸ್ವಾತಂತ್ರ ಹೋರಾಟದ ಸಂದರ್ಭದಲ್ಲಿ ಎಲ್ಲಿದ್ದರು? ಎಂದು ಅವರು ಪ್ರಶ್ನಿಸಿದರು.
ಸಮಾರಂಭದಲ್ಲಿ ಕ.ರಾ.ಗ್ರಾ.ಪಂ.ನೌಕರರ ಸಂಘದ ಅಧ್ಯಕ್ಷ ಮಾರುತಿ ಮಾನ್ಪಡೆ, ಪ್ರಧಾನ ಕಾರ್ಯದರ್ಶಿ ಎಂ.ಬಿ.ನಾಡಗೌಡ, ಉಪಾಧ್ಯಕ್ಷ ವಿ.ಪಿ.ಕುಲಕರ್ಣಿ ಸೇರಿ ಪ್ರಮುಖರು ಹಾಜರಿದ್ದರು.







