ಪ.ಬಂ.: ಶೇ.80ರಷ್ಟು ಮುಸ್ಲಿಮರ ಮಾಸಿಕ ಆದಾಯ ಕೇವಲ 5,000 ರೂ.: ಅಮರ್ತ್ಯ ಸೇನ್ ವರದಿ
ಕೊಲ್ಕತಾ, ಮಾ. 12: ಮೂರು ದಶಕಗಳ ಎಡರಂಗದ ಆಡಳಿತ ಹಾಗೂ ಕಳೆದ 5 ವರ್ಷಗಳ ಮಮತಾ ಬ್ಯಾನರ್ಜಿ ಸರಕಾರವಿರುವ ಪಶ್ಚಿಮ ಬಂಗಾಳದ ಶೇ.80ರಷ್ಟು ಗ್ರಾಮೀಣ ಮುಸ್ಲಿಮ್ ಕುಟುಂಬಗಳ ಗರಿಷ್ಠ ಮಾಸಿಕ ಆದಾಯ 5,000 ರೂ. ಮಾತ್ರ ಎಂಬ ಆಘಾತಕಾರಿ ಮಾಹಿತಿ ಬಹಿರಂಗವಾಗಿದೆ. ಈ ಪೈಕಿ ಶೇ.38.3ರಷ್ಟು ಕುಟುಂಬಗಳ ಆದಾಯ ಕೇವಲ 2,500 ರೂಪಾಯಿ ಅಥವಾ ಅದಕ್ಕಿಂತಲೂ ಕಡಿಮೆ ! ರಾಜ್ಯದಲ್ಲಿ 5 ಮಂದಿಯ ಕುಟುಂಬಕ್ಕೆ ಬಡತನ ರೇಖೆಯ ಮಿತಿ ತಿಂಗಳಿಗೆ 5,000 ರೂ. ಆಗಿದೆ. ನೊಬೆಲ್ ಪುರಸ್ಕೃತ ಅಮರ್ತ್ಯ ಸೇನ್ ಸ್ಥಾಪಿಸಿದ ಪ್ರತಿಚಿ ಟ್ರಸ್ಟ್, ಗೈಡೆನ್ಸ್ ಗಿಲ್ಡ್ ಹಾಗೂ ಅಸೋಸಿಯೇಶನ್ ಎಸ್.ಎನ್.ಎ.ಪಿ. ಈ ಮೂರು ಸಂಸ್ಥೆಗಳು ಸೇರಿ ಅಧ್ಯಯನ ನಡೆಸಿ ಮಾಡಿರುವ ವರದಿಯಲ್ಲಿ ಈ ಅಂಶಗಳು ಬಯಲಾಗಿವೆ. ಈ ವರದಿ ಫೆಬ್ರವರಿ 2016ರಲ್ಲಿ ಬಿಡುಗಡೆಯಾಗಿದೆ. ರಾಜ್ಯದ ಹೆಚ್ಚು ಮುಸ್ಲಿಮ್ ಜನಸಂಖ್ಯೆ ಇರುವ 325 ಗ್ರಾಮಗಳು ಹಾಗೂ 73 ನಗರ ಪ್ರದೇಶಗಳಲ್ಲಿ ಸಾಕ್ಷರತೆ, ಆರ್ಥಿಕ ಬೆಳವಣಿಗೆ, ಆರೋಗ್ಯ ಹಾಗೂ ಶಿಕ್ಷಣ ರಂಗಗಳಲ್ಲಿ ಸಮೀಕ್ಷೆ ನಡೆಸಿ ಈ ವರದಿ ರಚಿಸಲಾಗಿದೆ. ಈ ಮೂಲಕ ಅಲ್ಪಸಂಖ್ಯಾತರ ಅಭಿವೃದ್ಧಿಯಲ್ಲಿ ಎಡರಂಗ ಹಾಗೂ ಆ ಬಳಿಕ ಬಂದ ತೃಣಮೂಲ ಎರಡೂ ಪಕ್ಷಗಳು ಸಂಪೂರ್ಣವಾಗಿ ವಿಫಲವಾಗಿವೆ ಎಂಬುದು ಸ್ಪಷ್ಟವಾಗಿದೆ.





