ಮಲ್ಯರ ‘ವಿಲ್ಲಾ’ ಬ್ಯಾಂಕ್ ವಶಕ್ಕೆ ತೆಗೆದುಕೊಳ್ಳಲು ಸಹಕರಿಸದಿದ್ದ ಗೋವಾ ಬಿಜೆಪಿ ಸರಕಾರ

ಹೊಸದಿಲ್ಲಿ, ಮಾ.12: ಗೋವಾದಲ್ಲಿ ಮದ್ಯದ ದೊರೆ ವಿಜಯ ಮಲ್ಯ ಒಡೆತನದಲ್ಲಿರುವ ಆಸ್ತಿಗಳನ್ನು ವಶಕ್ಕೆ ತೆಗೆದುಕೊಳ್ಳಬಯಸಿದ್ದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವನ್ನು ಗೋವಾದ ಬಿಜೆಪಿ ಸರಕಾರ ತಡೆದಿತ್ತು ಎಂಬ ಸ್ಫೋಟಕ ಮಾಹಿತಿಯನ್ನು ಎಸ್‌ಬಿಐ ಮುಖ್ಯಸ್ಥೆ ಅರುಂಧತಿ ಭಟ್ಟಾಚಾರ್ಯ ಹೊರಗೆಡಹಿದ್ದಾರೆ.
ಗೋವಾ ರಾಜಧಾನಿ ಪಣಜಿ ಸಮೀಪ ಭವ್ಯ ವಿಲ್ಲಾವೊಂದನ್ನು ಹೊಂದಿರುವ ಮಲ್ಯ ಅದನ್ನು ಬ್ಯಾಂಕಿಗೆ ಗ್ಯಾರಂಟಿಯಾಗಿ ಒದಗಿಸಿದ್ದರು ಎಂದು ಟಿವಿ ಶೋ ಒಂದರಲ್ಲಿ ಹೇಳಿದ ಭಟ್ಟಾಚಾಯರ್ಯ, ಐಎಎಸ್ ಅಧಿಕಾರಿಯಗಿರುವ ಜಿಲ್ಲಾ ಮ್ಯಾಜಿಸ್ಟ್ರೇಟ್ ಒಬ್ಬರು ಮಲ್ಯರ ವಿಲ್ಲಾವನ್ನು ವಶಕ್ಕೆ ತೆಗೆದುಕೊಳ್ಳುವಂತೆ ಹೇಳಿದ ಹೈಕೋರ್ಟ್ ಆದೇಶವನ್ನು ಜಾರಿಗೊಳಿಸಲು ನಿರಾಕರಿಸಿದ್ದರು ಎಂದು ಹೇಳಿದರು.
‘‘ನಾವು ಮಲ್ಯರ ಗೋವಾ ವಿಲ್ಲಾವನ್ನು ವಶಕ್ಕೆ ಪಡೆಯಲು ಪ್ರಯತ್ನಿಸುತ್ತಿದ್ದೆವು. ಈ ಕ್ರಮವನ್ನು ಮೂರು ತಿಂಗಳೊಳಗಾಗಿ ತೆಗೆದುಕೊಳ್ಳಬೇಕೆಂಬ ಹೈಕೋರ್ಟ್ ಆದೇಶದ ಹೊರತಾಗಿಯೂ ಕಲೆಕ್ಟರ್ ಎಂಟು ಸುತ್ತುಗಳ ವಿಚಾರಣೆ ನಡೆಸಿ ನಂತರ ರಜೆ ಮೇಲೆ ತೆರಳಿದರು. ಹೆಚ್ಚಾಗಿ ಕಲೆಕ್ಟರ್ ಹುದ್ದೆಯಲ್ಲಿರುವವರು ಇಂತಹ ಆದೇಶವನ್ನು ಯಾವುದೇ ವಿಚಾರಣೆ ನಡೆಸದೆ ಜಾರಿಗೊಳಿಸುತ್ತಾರಾದರೂ ಈ ಅಧಿಕಾರಿ ಎಂಟು ಸುತ್ತಿನ ವಿಚಾರಣೆ ನಡೆಸಿದರು’’ ಎಂದು ಹೇಳಿದರು.
‘‘ಸಾಲ ನೀಡಿದ ಬ್ಯಾಂಕ್‌ಗಳ ಅಟಾರ್ನಿ ಜನರಲ್ ಮುಕುಲ್ ರೋಹಟ್ಗಿಯವರನ್ನು ಸಂಪರ್ಕಿಸಿದ್ದರೂ ಅವರು ಅತ್ಯುನ್ನತ ನ್ಯಾಯಾಲಯ (ಸುಪ್ರೀಂಕೋರ್ಟ್)ದ ಕದ ತಟ್ಟದಂತೆ ಸಲಹೆ ನೀಡಿದರಲ್ಲದೆ ಸಾಲ ವಸೂಲಿ ನ್ಯಾಯಾಧಿಕರಣದ ಮೊರೆ ಹೋಗಲು ತಿಳಿಸಿದರು,’’ ಎಂದು ಭಟ್ಟಾಚಾರ್ಯ ತಿಳಿಸಿದರು.
‘‘ಮರುದಿನ ನಾವು ಹೈಕೋರ್ಟಿಗೆ ಹೋದರೂ ಕೋರ್ಟ್ ನಮ್ಮನ್ನು ಸಾಲ ವಸೂಲಿ ನ್ಯಾಯಾಧಿಕರಣಕ್ಕೆ ಅಪೀಲು ಸಲ್ಲಿಸಲು ಸಲಹೆ ನೀಡಲಾಯಿತು. ಆದರೆ ಅದರಿಂದ ನಮಗೇನೂ ಪ್ರಯೋಜನವಾಗಿಲ್ಲ. ಅವರು ಪ್ರಮಾಣ ಮಾಡಿರುವ ಆಸ್ತಿ ವಶಪಡಿಸುವುದು ನಮಗೆ ಬೇಕಿತ್ತು. ಮಲ್ಯರವರು ತಮ್ಮ ಆಸ್ತಿಯ ಬಗ್ಗೆ ವೈಯಕ್ತಿಕ ಗ್ಯಾರಂಟಿ ನೀಡಿದ್ದರು,’’ ಎಂದರು.





