ಗೋಮಾಂಸ ನಿಷೇಧ ವಿರುದ್ಧ ಗುಡುಗಿದ ಮಹಾರಾಷ್ಟ್ರದ ಬಿಜೆಪಿ ಶಾಸಕ
‘ನೀವೇಕೆ ಬಡವರ ಆಹಾರವನ್ನು ಕಿತ್ತುಕೊಳ್ಳುತ್ತೀರಿ?’

ಮುಂಬೈ, ಮಾ.12: ರಾಜ್ಯದ ಆಡಳಿತ ಬಿಜೆಪಿಗೆ ತೀವ್ರ ಮುಜುಗರ ಉಂಟು ಮಾಡಿರುವ ಬೆಳವಣಿಗೆಯೊಂದರಲ್ಲಿ, ಬೀಢ್ ಜಿಲ್ಲೆಯ ತೀವ್ರ ಬರಗಾಲ ಪೀಡಿತ ಅಶ್ಟಿ ಕ್ಷೇತ್ರದ ಬಿಜೆಪಿ ಶಾಸಕ ಭೀಮ್‌ರಾವ್ ಧೊಂಡೆ ಗೋಮಾಂಸ ನಿಷೇಧಿಸಿರುವ ರಾಜ್ಯ ಸರಕಾರದ ನಿರ್ಧಾರವನ್ನು ವಿಧಾನಸಭೆಯಲ್ಲಿ ಗುರುವಾರ ಕಟುವಾಗಿ ಟೀಕಿಸಿದ್ದಾರೆ.
ರೈತಾಪಿ ವರ್ಗದ ಸಮಸ್ಯೆಯ ವಿಚಾರವಾಗಿ ನಡೆಯುತ್ತಿದ್ದ ಚರ್ಚೆಯಲ್ಲಿ ಮಾತನಾಡುತ್ತಿದ್ದ ಭೀಮ್‌ರಾವ್ ‘‘ನೀವೇಕೆ ಬಡ ಜನರ ಆಹಾರವನ್ನು ಕಿತ್ತುಕೊಳ್ಳುತ್ತೀರಿ ? ಬರಗಾಲದ ಸಮಯದಲ್ಲಿ ತಮ್ಮಲ್ಲಿ ರುವ ಫಲದಾಯಕ ಪ್ರಾಣಿಗಳಿಗೆ ಆಹಾರವೊದಗಿಸುವುದೇ ರೈತರಿಗೆ ದೊಡ್ಡ ಸವಾಲಿನ ಕೆಲಸ ವಾಗಿರುವಾಗ ವಯ ಸ್ಸಾದ ಜಾನುವಾರುಗಳಿಗೆ ಎಲ್ಲಿಂದ ಆಹಾರವೊದಗಿಸಲು ಸಾಧ್ಯ?’’ ಎಂದು ಅವರು ಪ್ರಶ್ನಿಸಿದರು.
ಮಹಾರಾಷ್ಟ್ರ ಸರಕಾರ ಕಳೆದ ಮಾರ್ಚ್ ತಿಂಗಳಲ್ಲಿ ಜಾರಿಗೊಳಿಸಿದ್ದ ಗೋಮಾಂಸ ನಿಷೇಧಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗಿದ್ದರೂ, ಆಡಳಿತ ಪಕ್ಷದ ಶಾಸಕರೊಬ್ಬರು ಅದರ ವಿರುದ್ಧ ದನಿಯೆತ್ತಿದ್ದು ಇದೇ ಮೊದಲ ಬಾರಿಯಾಗಿದೆ. ಈ ಹಿಂದೆ ಕಾಂಗ್ರೆಸ್ಸಿನಲ್ಲಿದ್ದ ಧೊಂಡೆ ಮಾರ್ಚ್ 2014ರಲ್ಲಿ ಲೋಕಸಭಾ ಚುನಾವಣೆಗೆ ಸ್ವಲ್ಪವೇ ಮುನ್ನ ಬಿಜೆಪಿ ಸೇರಿದ್ದರು. ನಂತರ ರಾಜ್ಯದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಅವರು ಮಾಜಿ ರಾಜ್ಯ ಸಚಿವ ಎನ್‌ಸಿಪಿಯ ಸುರೇಶ್ ದಾಸ್ ಅವರನ್ನು ಸೋಲಿಸಿದ್ದರು. ಧೊಂಡೆಯವರು ಅಶ್ಟಿ ಕ್ಷೇತ್ರವನ್ನು ಎರಡನೆ ಅವಧಿಯಲ್ಲಿ ಪ್ರತಿನಿಧಿಸುತ್ತಿದ್ದಾರೆ.
ತಾನು ಗೋಮಾಂಸ ನಿಷೇಧದ ಬಗ್ಗೆ ಮಾತನಾಡಿದರೆ ತನ್ನ ಕೆಲಸ ಕಳೆದುಕೊಳ್ಳಬೇಕಾಗಬಹುದು ಎಂದು ಕೇಂದ್ರ ಸರಕಾರದ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಹ್ಮಣ್ಯನ್ ಮುಂಬೈ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಗಳೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಹೇಳಿದ ಎರಡೇ ದಿನಗಳಲ್ಲಿ ಧೊಂಡೆಯವರ ಹೇಳಿಕೆ ಹೊರ ಬಿದ್ದಿದೆ.





