ರಾಷ್ಟ್ರಪತಿ ಭವನದಲ್ಲಿ ‘ನವ ಅನ್ವೇಷಣೆ ಉತ್ಸವ’ಕ್ಕೆ ಚಾಲನೆ
ಹೊಸದಿಲ್ಲಿ,ಮಾ.12: ದೇಶಾದ್ಯಂತ ತಳಮಟ್ಟದಲ್ಲಿ ಹೊಸ ಪರಿಕಲ್ಪನೆಗಳನ್ನು ಉತ್ತೇಜಿಸುವ ಪ್ರಯತ್ನವಾಗಿ ರಾಷ್ಟ್ರಪತಿ ಭವನದಲ್ಲಿ ಆಯೋಜಿಸಲಾಗಿರುವ ‘ನವ ಅನ್ವೇಷಣೆ ಉತ್ಸವ ’ವನ್ನು ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರು ಶನಿವಾರ ಉದ್ಘಾಟಿಸಿದರು. ರಾಷ್ಟ್ರಪತಿಗಳ ಕಚೇರಿಯು ರಾಷ್ಟ್ರೀಯ ನವ ಅನ್ವೇಷಣೆ ಪ್ರತಿಷ್ಠಾನ (ಎನ್‌ಐಎಫ್) ದ ಸಹಭಾಗಿತ್ವದಲ್ಲಿ ಹಮ್ಮಿಕೊಂಡಿರುವ ಎರಡನೆ ವರ್ಷದ ಈ ಉತ್ಸವವು ಮಾ.19ರವರೆಗೆ ಏಳು ದಿನಗಳ ಕಾಲ ನಡೆಯಲಿದೆ.
ರಾಷ್ಟ್ರಪತಿ ಭವನದ ವಿಶ್ವಪ್ರಸಿದ್ಧ ಮೊಗಲ್ ಗಾರ್ಡನ್ಸ್ ನಲ್ಲಿ ನವ ಅನ್ವೇಷಣೆಗಳ ಪ್ರದರ್ಶನದೊಂದಿಗೆ ಉತ್ಸವಕ್ಕೆ ಚಾಲನೆ ದೊರಕಿದೆ.
ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಅಶುತೋಷ ಶರ್ಮಾ ಅವರು,ಇದು ನವ ಪರಿಕಲ್ಪನೆಗಳ ಕಾಲವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಉತ್ಸವದ ಬಜೆಟ್‌ನ್ನು ಶೇ.600ರಷ್ಟು ಹೆಚ್ಚಿಸಲಾಗಿದೆ ಎಂದು ತಿಳಿಸಿದರು.
ಹೊಸತನದ ಕಲ್ಪನೆಗಳಿಗಾಗಿ ದೇಶಾದ್ಯಂತದ 6-12ನೆ ತರಗತಿಗಳ ವಿದ್ಯಾರ್ಥಿಗಳನ್ನು ತಲುಪುವುದು ನಮ್ಮ ಉದ್ದೇಶವಾಗಿದೆ. ಒಟ್ಟೂ ಒಂದು ಲಕ್ಷ ಪರಿಕಲ್ಪನೆಗಳನ್ನು ಆಯ್ಕೆ ಮಾಡಿ ಅವುಗಳನ್ನು ಅನ್ವೇಷಣೆಯಾಗಿ ಪರಿವರ್ತಿಸಲು ಪ್ರತಿಯೊಂದಕ್ಕೂ 5,000 ರೂ.ನೀಡಲಾಗುವುದು. ಬಳಿಕ 10,000 ಅನ್ವೇಷಣೆಗಳನ್ನು ರಾಜ್ಯಮಟ್ಟದಲ್ಲಿ ಮತ್ತು ಈ ಪೈಕಿ 1,000 ಅನ್ವೇಷಣೆಗಳನ್ನು ರಾಷ್ಟ್ರೀಯ ಮಟ್ಟದಲ್ಲಿ ಹಾಗೂ ಅಂತಿಮವಾಗಿ 60ನ್ನು ರಾಷ್ಟ್ರಪತಿ ಭವನದಲ್ಲಿ ಪ್ರದರ್ಶಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ.ಹರ್ಷವರ್ಧನ್ ವಿರಚಿತ ‘ಫೆಸ್ಟಿವಲ್ ಆಫ್ ಇನ್ನೋವೇಷನ್-2015 ’ಕೃತಿಯನ್ನು ರಾಷ್ಟ್ರಪತಿಗಳು ಬಿಡುಗಡೆಗೊಳಿಸಿದರು.





