ವೇದಿಕೆ ಹಂಚಿಕೊಂಡ ಮೋದಿ-ನಿತೀಶ್ ಪ್ರಧಾನಿಯ ಗುಣಗಾನಗೈದ ಬಿಹಾರ ಸಿಎಂ

ಪಟ್ನಾ, ಮಾ.12: ಕಳೆದ ವರ್ಷ ನಡೆದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಪರಸ್ಪರ ದೋಷಾರೋಪ, ವಾಗ್ದಾಳಿಗಳನ್ನು ನಡೆಸಿದ್ದ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ತಮ್ಮ ಹಳೆಯ ವೈಮನಸ್ಸನ್ನು ಮರೆತು ಶನಿವಾರ ಒಂದೇ ವೇದಿಕೆಯನ್ನು ಹಂಚಿಕೊಂಡಿದ್ದಾರೆ.
ಮೋದಿ ಹಾಗೂ ನಿತೀಶ್ ಕುಮಾರ್ ಇಂದು ಪಟ್ನಾ ಹೈಕೋರ್ಟ್‌ನ ಶತ ಮಾನೋತ್ಸವ ಹಾಗೂ ಹಾಜಿಪುರದಲ್ಲಿ ನಡೆದ ರೈಲ್ವೆ ಯೋಜನೆಗಳ ಉದ್ಘಾಟನಾ ಕಾರ್ಯ ಕ್ರಮಗಳಲ್ಲಿ ಜೊತೆಯಾಗಿ ಪಾಲ್ಗೊಂಡರು. ಬಿಹಾರದಲ್ಲಿ ಮಹಾ ಮೈತ್ರಿಕೂಟ ಸರಕಾರ ಸ್ಥಾಪನೆಯಾದ ಬಳಿಕ ರಾಜ್ಯಕ್ಕೆ ಮೋದಿಯ ಪ್ರಥಮ ಭೇಟಿ ಇದಾಗಿದೆ. ಪಟ್ನಾ ಹೈಕೋರ್ಟ್‌ನ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ನಿತೀಶ್, ಪರೋಕ್ಷವಾಗಿ ಮೋದಿಯವರನ್ನು ಪ್ರಶಂಸೆಗೈದರು. ‘‘ಭಾರತ ಇಂದು ಹೆಚ್ಚು ಸಶಕ್ತವಾಗಿದೆ. ಅದರ ಆಂತರಿಕ ಬಲವು ಹೆಚ್ಚಾಗಿದೆ. ಪ್ರಜಾಪ್ರಭುತ್ವವು ಈಗ ಬಲಿಷ್ಠವಾಗಿದೆ’’ ಎಂದವರು ಹೇಳಿದರು. ಮೋದಿ ಸರಕಾರವು ಅಸಹಿಷ್ಣುತೆಗೆ ಕುಮ್ಮಕ್ಕು ನೀಡುತ್ತಿದೆ ಹಾಗೂ ಪ್ರಜಾಪ್ರಭುತ್ವವನ್ನು ಕಡೆಗಣಿಸುತ್ತಿದೆ ಎಂದು ಪ್ರತಿಪಕ್ಷಗಳು ಆರೋಪಿಸುತ್ತಿರುವ ಈ ಸಂದರ್ಭದಲ್ಲಿ ನಿತೀಶ್‌ರ ಈ ಹೇಳಿಕೆಯು ಹೆಚ್ಚಿನ ಮಹತ್ವವನ್ನು ಪಡೆದಿದೆ.
ಆನಂತರ ಹಾಜಿಪುರದಲ್ಲಿ ವಿವಿಧ ರೈಲ್ವೆ ಯೋಜನೆಗಳ ಉದ್ಘಾಟನೆ ಸಮಾರಂಭದಲ್ಲಿ ನಿತೀಶ್ ಭಾಷಣ ಮಾಡುತ್ತಿದ್ದ ಸಂದರ್ಭದಲ್ಲಿ, ಸಭೆಯಲ್ಲಿದ್ದ ಕೆಲವರು ತನ್ನ ಪರ ಘೋಷಣೆಗಳನ್ನು ಕೂಗುತ್ತಿದ್ದಾಗ, ಮೋದಿ ಎದ್ದು ನಿಂತು ಹಾಗೆ ಮಾಡದಂತೆ ಅವರಿಗೆ ಮನವಿ ಮಾಡಿದರು.
ಹಾಜಿಪುರದ ಕಾರ್ಯಕ್ರಮದಲ್ಲಿ ನಿತೀಶ್ ಹಾಗೂ ಮೋದಿ ಜೊತೆಯಾಗಿ ಆಸೀನರಾಗಿದ್ದರು. ನಿತೀಶ್ ತನ್ನ ಭಾಷಣದಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳ ನಡುವೆ ಬಾಂಧವ್ಯದ ಆವಶ್ಯಕತೆಯನ್ನು ಒತ್ತಿ ಹೇಳಿದರು. ‘‘ಅಭಿವೃದ್ಧಿಗಾಗಿ ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರವು ಜೊತೆಗೂಡಿ ಶ್ರಮಿಸಬೇಕಾಗಿದೆ’ ಎಂದವರು ಹೇಳಿದರು. ಹೈಕೋರ್ಟ್ ಕಾರ್ಯಕ್ರಮದ ಸಮಾರೋಪಗೊಂಡ ಬಳಿಕ ಇಬ್ಬರೂ ನಾಯಕರು ಜೊತೆಯಾಗಿ ಮುಗುಳ್ನಗುತ್ತಾ ಕ್ಯಾಮರಾಗಳಿಗೆ ಪೋಸ್ ನೀಡಿದರು.
ಇದಕ್ಕೂ ಮುನ್ನ, ಹೊಸದಿಲ್ಲಿಯಿಂದ ವಿಮಾನದಲ್ಲಿ ಆಗಮಿಸಿದ ಮೋದಿಯವರನ್ನು ಸ್ವಾಗತಿಸಲು ನಿತೀಶ್ ಪಾಟ್ನಾ ವಿಮಾನ ನಿಲ್ದಾಣದಲ್ಲಿ ಉಪಸ್ಥಿತರಿದ್ದರು.
ನಿತೀಶ್ ಕುಮಾರ್ ಅವರು ಕಳೆದ ವರ್ಷದ ಬಿಹಾರ ವಿಧಾನಸಭಾ ಚುನಾ ವಣೆಯಲ್ಲಿ ಜೆಡಿಯು-ಆರ್‌ಜೆಡಿ -ಕಾಂಗ್ರೆಸ್ ಪಕ್ಷಗಳನ್ನು ಒಳಗೊಂಡ ಮಹಾಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದರು.
ಮಹಾಮೈತ್ರಿ ಕೂಟವು ಚುನಾವಣೆಯಲ್ಲಿ 243 ವಿದಾನಸಭಾ ಕ್ಷೇತ್ರಗಳ ಪೈಕಿ 178ರಲ್ಲಿ ಜಯಗಳಿಸಿದ್ದರೆ, ಬಿಜೆಪಿ 58 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು.





