ಪಾಕ್‌ಗಿಂತ ಹೆಚ್ಚು ಪ್ರೀತಿ ಭಾರತೀಯರಿಂದ ಸಿಕ್ಕಿದೆ: ಶಾಹಿದ್ ಅಫ್ರಿದಿ

ಕೊಲ್ಕತ್ತ, ಮಾ. 13: ಶನಿವಾರ ಭಾರತಕ್ಕೆ ತಲುಪಿದ ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಶಾಹಿದ್ ಅಫ್ರಿದಿ ಕೊಲ್ಕತ್ತಾದಲ್ಲಿ ರವಿವಾರ ಪತ್ರಿಕಾಗೋಷ್ಠಿ ನಡೆಸಿ ಭಾರತ ಹಾಗೂ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಬಗ್ಗೆ ಆತ್ಮೀಯವಾಗಿ ಮಾತನಾಡಿದ್ದಾರೆ.
ಭಾರತಕ್ಕೆ ಬಂದಿರುವುದು ನನಗೆ ಭಾರೀ ಸಂತಸ ತಂದಿದೆ. ಇಲ್ಲಿ ನಾನು ಕ್ರಿಕೆಟನ್ನು ಯಾವತ್ತೂ ತುಂಬಾ ಎಂಜಾಯ್ ಮಾಡಿದ್ದೇನೆ. ಇಲ್ಲಿನ ಜನರು ನಮ್ಮನ್ನು ಅತ್ಯಂತ ಪ್ರೀತಿಯಿಂದ ಕಂಡಿದ್ದಾರೆ. ಬಹಶಃ ಇಷ್ಟು ಪ್ರೀತಿ ನಮಗೆ ಪಾಕಿಸ್ತಾನದಲ್ಲೂ ಸಿಕ್ಕಿರಲಿಕ್ಕಿಲ್ಲ ಎಂದು ಭಾರತೀಯ ಕ್ರೀಡಾಭಿಮಾನಿಗಳನ್ನು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.
ಮಾ. 19ಕ್ಕೆ ನಡೆಯಲಿರುವ ಭಾರತ ವಿರುದ್ಧದ ಪಂದ್ಯದ ಬಗ್ಗೆ ಕೇಳಿದಾಗ, ‘‘ಭಾರತ ಈಗ ಅತ್ಯುತ್ತಮವಾಗಿ ಆಡುತ್ತಿದೆ. ಏಷ್ಯಾ ಕಪ್‌ನಲ್ಲಿ ನಮ್ಮ ವಿರುದ್ಧ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಹಾಗೂ ಯುವರಾಜ್ ಸಿಂಗ್ ಶ್ರೇಷ್ಠ ಪ್ರದರ್ಶನ ನೀಡಿದ್ದಾರೆ.’’ ಎಂದು ಹೇಳಿದರು.
ಪಾಕ್ ತಂಡದ ಶುಐಬ್ ಮಲಿಕ್ ಮಾತನಾಡಿ, ‘‘ಭಾರತಕ್ಕೆ ಬರುವುದು, ಇಲ್ಲಿ ಆಟವಾಡುವುದು ನನಗೆ ಯಾವತ್ತೂ ಖುಷಿಯ ವಿಷಯ. ಇಲ್ಲಿಯ ಜನರು ನಮ್ಮನ್ನು ಬಹಳ ಪ್ರೀತಿಯಿಂದ ಕಾಣುತ್ತಾರೆ, ಗೌರವಿಸುತ್ತಾರೆ. ಭಾರತ ನನ್ನ ಮಾವನ ಮನೆ, ನಮಗೆ ಇಲ್ಲಿ ಯಾವತ್ತೂ ಅಭದ್ರತೆಯ ಭಾವನೆ ಕಾಡಿಲ್ಲ. ನಮಗೆ ಅತ್ಯುತ್ತಮವಾಗಿ ಆಡಲು ಒಂದು ಸುವರ್ಣಾವಕಾಶ ಸಿಕ್ಕಿದೆ.’’ ಎಂದು ಹೇಳಿದರು.





