ಮೂಡುಬಿದಿರೆ: 95 ಫಲಾನುಭವಿಗಳಿಗೆ ಸಾಲಮನ್ನಾ ಪತ್ರ ವಿತರಣೆ

ಮೂಡುಬಿದಿರೆ, ಮಾ.13: ಇಲ್ಲಿಗೆ ಸಮೀಪದ ಸುವರ್ಣನಗರ (ಬಗ್ಗಜಾಲ್)ದಲ್ಲಿ ರಾಜೀವ್‌ಗಾಂಧಿ ವಸತಿ ನಿಗಮದ ವತಿಯಿಂದ ತಲಾ 25,000 ರೂ ಸಾಲ ಪಡೆದುಕೊಂಡು ಆಶ್ರಯ ಮನೆಗಳನ್ನು ನಿರ್ಮಿಸಿರುವ 95 ಫಲಾನುಭವಿಗಳಿಗೆ ಸಾಲಮನ್ನಾ ತಿಳುವಳಿಕೆ ಪತ್ರ ವಿತರಣೆ ಕಾರ್ಯಕ್ರಮ ರವಿವಾರ ಜರಗಿತು.
ತಿಳುವಳಿಕೆ ಪತ್ರಗಳನ್ನು ವಿತರಿಸಿ ಮಾತನಾಡಿದ ಯುವಜನ ಸೇವೆ ಮತ್ತು ಮೀನುಗಾರಿಕೆ ಸಚಿವ ಕೆ.ಅಭಯಚಂದ್ರ ಜೈನ್, ಮೂಡುಬಿದಿರೆ ಪುರಸಭಾ ವ್ಯಾಪ್ತಿಯಲ್ಲಿ ಅಲಂಗಾರು, ಮಾರೂರು ಹಾಗೂ ಸುವರ್ಣನಗರಗಳಲ್ಲಿ ಆಶ್ರಯ ಯೋಜನೆಯಡಿ ಸಾಲ ಪಡೆದುಕೊಂಡು ಮನೆ ನಿರ್ಮಿಸಿದವರ ಎಲ್ಲ ಸಾಲಗಳನ್ನು ಮನ್ನಾ ಮಾಡಲಾಗುವುದು. ಅದರಂತೆ ಸುವರ್ಣ ನಗರದ 95 ಫಲಾನುಭವಿಗಳ 55 ಲಕ್ಷ ರೂ. ಸಾಲವನ್ನು ಮನ್ನಾ ಮಾಡಲಾಗಿದೆ ಎಂದು ತಿಳಿಸಿದರು. ಪುರಸಭಾಧ್ಯಕ್ಷೆ ರೂಪಾ ಸಂತೋಷ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಉಪಾಧ್ಯಕ್ಷೆ ಶಕುಂತಳಾ ದೇವಾಡಿಗ, ಸ್ಥಾಯಿ ಸಮಿತಿಯ ಅಧ್ಯಕ್ಷ ಕೊರಗಪ್ಪ, ಸದಸ್ಯರಾದ ಬಾಹುಬಲಿ ಪ್ರಸಾದ್, ರತ್ನಾಕರ ದೇವಾಡಿಗ, ಅಬ್ದುಲ್ ಬಶೀರ್, ಎಲಿಜಾ ಮಿನೇಜಸ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಲೇರಿಯನ್ ಸಿಕ್ವೇರ, ಆಶ್ರಯ ಸಮಿತಿಯ ಸದಸ್ಯರಾದ ಸುಂದರ ಪೂಜಾರಿ ಮತ್ತು ಸತೀಶ್ ಕೋಟ್ಯಾನ್ ಉಪಸ್ಥಿತರಿದ್ದರು. ಅನಿಲ್ ಸಿಪ್ರಿಯಾನ್ ಲೋಬೊ ಸ್ವಾಗತಿಸಿದರು. ಮೂಡಾ ಅಧ್ಯಕ್ಷ ಸುರೇಶ್ ಕೋಟ್ಯಾನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಪಿಎಂಸಿ ಸದಸ್ಯ ಜೊಸ್ಸಿ ಮಿನೇಜಸ್ ಕಾರ್ಯಕ್ರಮ ನಿರೂಪಿಸಿ, ಫಲಾನುಭವಿಗಳ ವರದಿ ನೀಡಿದರು. ಅಂಗನವಾಡಿ ಕಾರ್ಯಕರ್ತೆ ಸುಮತಿ ವಂದಿಸಿದರು.





