ಉಪ್ಪಿನಂಗಡಿ: ರೈಲು ಡಿಕ್ಕಿ, ನೀರಕಟ್ಟೆಯ ಯುವಕ ಸಾವು

ಉಪ್ಪಿನಂಗಡಿ: ಬೆಂಗಳೂರಿನಲ್ಲಿ ರೈಲು ಡಿಕ್ಕಿಯಾಗಿ ಪುತ್ತೂರು ತಾಲೂಕಿನ ಬಜತ್ತೂರು ಗ್ರಾಮದ ನೀರಕಟ್ಟೆ ಎಂಬಲ್ಲಿನ ಯುವಕನೊಬ್ಬ ದಾರುಣವಾಗಿ ಮೃತಪಟ್ಟ ಘಟನೆ ನಡೆದಿದೆ.
ಬಜತ್ತೂರು ಗ್ರಾಮದ ನೀರಕಟ್ಟೆಯ ಚಂದಪ್ಪ ಗೌಡ ಎಂಬವರ ಪುತ್ರ ಮಹೇಶ್( 20) ಮೃತಪಟ್ಟ ಯುವಕ. ಈತ ಉಪ್ಪಿನಂಗಡಿಯಲ್ಲಿ ಐಟಿಐ ಶಿಕ್ಷಣ ಬೆಂಗಳೂರಿನ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಶನಿವಾರ ಬೆಳಿಗ್ಗೆ ತನ್ನ ಕಂಪೆನಿಗೆ ಕೆಲಸಕ್ಕೆಂದು ತೆರಳುತ್ತಿದ್ದ ಈತ ಬೆಂಗಳೂರಿನ ಬೈಯಪ್ಪನಹಳ್ಳಿಯ ದೊಡ್ಡನಕೊಂಡಿ, ಮಾರ್ತಹಳ್ಳಿ ರೈಲ್ವೇ ಕ್ರಾಸಿಂಗ್ ಬಳಿ ರೈಲು ಹಳಿಯನ್ನು ದಾಟುತ್ತಿದ್ದ ವೇಳೆಯಲ್ಲಿ ರೈಲು ಡಿಕ್ಕಿಯಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಕ್ರಿಯಾಶೀಲ ಯುವಕನಾಗಿದ್ದ ಮಹೇಶ್ ಪಿಯುಸಿ ಶಿಕ್ಷಣದ ಬಳಿಕ ಉಪ್ಪಿನಂಗಡಿಯ ಸಹಸ್ರ ಕೋಚಿಂಗ್ ಸೆಂಟರ್‌ನಲ್ಲಿ ಐಟಿಐ ಪೂರೈಸಿದ್ದು, ಇತ್ತೀಚೆಗಷ್ಟೇ ಈ ಸಂಸ್ಥೆಯ ದಶಮಾನೋತ್ಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಬೆಂಗಳೂರಿಗೆ ತೆರಳಿದ್ದರು. ಮೃತದೇಹವನ್ನು ಭಾನುವಾರ ಸಂಜೆ ಬೆಂಗಳೂರಿನಿಂದ ನೀರಕಟ್ಟೆಗೆ ತಂದು ಅಂತ್ಯಕ್ರಿಯೆ ನಡೆಸಲಾಯಿತು. ಮೃತರು ತಂದೆ, ತಾಯಿ. ಓರ್ವ ಸಹೋದರ ಮತ್ತು ಓರ್ವ ಸಹೋದರಿಯನ್ನು ಅಗಲಿದ್ದಾರೆ.





