ಗಂಗಾ ರಾಮ್‌ರ ಮೊಮ್ಮಗಳ ಮೊಮ್ಮಗಳು ವರ್ಮಂಟ್ ಗವರ್ನರ್ ಅಭ್ಯರ್ಥಿ

ವಾಶಿಂಗ್ಟನ್, ಮಾ. 13: ಭಾರತೀಯ ಸಿವಿಲ್ ಇಂಜಿನಿಯರ್ ಗಂಗಾರಾಮ್‌ರ ಹೆಸರು ಈಗ ಹೆಚ್ಚಿನವರಿಗೆ ಗೊತ್ತಿರಲಿಕ್ಕಿಲ್ಲ. ಅವರು ವಿಭಜನೆಗೂ ಮೊದಲು ಭಾರತ ಮತ್ತು ಪಾಕಿಸ್ತಾನಗಳಲ್ಲಿ ಸರಣಿ ಆಸ್ಪತ್ರೆಗಳನ್ನು ಕಟ್ಟಿದ್ದರು. ಈಗ ಅವರ ಮೊಮ್ಮಗಳ ಮೊಮ್ಮಗಳು ಅಮೆರಿಕದ ವರ್ಮಂಟ್ ರಾಜ್ಯದಲ್ಲಿ ಲೆಫ್ಟಿನೆಂಟ್ ಗವರ್ನರ್ ಹುದ್ದೆಗೆ ಸ್ಪರ್ಧಿಸುತ್ತಿದ್ದಾರೆ.
ತನ್ನ ಅಜ್ಜನ ಅಜ್ಜನಿಂದ ಪ್ರೇರಣೆ ಪಡೆದಿರುವ ಭಾರತೀಯ-ಯಹೂದಿ-ಅಮೆರಿಕನ್ ಕೇಶಾ ರಾಮ್, ಆಯ್ಕೆಯಾದರೆ ತನ್ನ ಪ್ರಧಾನ ಆದ್ಯತೆ ಆರೋಗ್ಯ ರಕ್ಷಣೆ ಮತ್ತು ಶಿಕ್ಷಣ ಎಲ್ಲರಿಗೂ ಲಭಿಸುವಂತೆ ಮಾಡುವುದು ಎಂದು ಹೇಳುತ್ತಾರೆ.
29 ವರ್ಷದ ಕೇಶಾ ರಾಮ್, ವರ್ಮಂಟ್ ರಾಜ್ಯದ ಅತ್ಯುನ್ನತ ಹುದ್ದೆಗೆ ಸ್ಪರ್ಧಿಸುತ್ತಿರುವ ಮೊದಲ ಬಿಳಿಯೇತರ ಮಹಿಳೆಯಾಗಿದ್ದಾರೆ.
‘‘ಕಳೆದ ವರ್ಷ ನಾನು ಭಾರತದಲ್ಲಿದ್ದೆ. ದುರದೃಷ್ಟವಶಾತ್, ನಾನು ನನ್ನ ತಂದೆಯ ಚಿತಾ ಭಸ್ಮವನ್ನು ಪವಿತ್ರ ನದಿಗೆ ತೆಗೆದುಕೊಂಡು ಹೋಗಬೇಕಾಗಿತ್ತು. ಆದರೆ, ನಮ್ಮ ಪ್ರವಾಸದ ದಾರಿಯಲ್ಲಿ ಸರ್ ಗಂಗಾ ರಾಮ್ ಆಸ್ಪತ್ರೆಗೆ ಭೇಟಿ ನೀಡುವ ಅವಕಾಶ ಒದಗಿತು. ಈ ಆಸ್ಪತ್ರೆಯ ಆಡಳಿತ ಮಂಡಳಿಯನ್ನು ನಮ್ಮ ಸಂಬಂಧಿಕರು ಮುನ್ನಡೆಸುತ್ತಿದ್ದಾರೆ’’ ಎಂದು ಪಿಟಿಐಗೆ ನೀಡಿದ ಸಂದರ್ಶನವೊಂದರಲ್ಲಿ ರಾಮ್ ಹೇಳಿದರು.
ಕೇಶಾ ರಾಮ್‌ರ ತಂದೆ ಲಾಹೋರ್‌ನಲ್ಲಿ ಹುಟ್ಟಿದರು. ಆದರೆ, ವಿಭಜನೆಯ ಬಳಿಕ, ಕುಟುಂಬ ಭಾರತದ ಪಂಜಾಬ್‌ಗೆ ವಲಸೆ ಹೋಯಿತು. ಅವರು ಬಳಿಕ ಉನ್ನತ ಅಧ್ಯಯನಕ್ಕಾಗಿ ಅಮೆರಿಕಕ್ಕೆ ಬಂದರು. ಅಲ್ಲಿ ಯಹೂದಿ ಅಮೆರಿಕನ್ ಮಹಿಳೆಯ ಪರಿಚಯವಾಯಿತು. ಅವರ ಮಗಳು ಕೇಶಾ ರಾಮ್.







