ಮೊದಲ ಸುತ್ತಿನಲ್ಲಿ ಕರ್ಬರ್, ಮುಗುರುಝಗೆ ಸೋಲು
ಇಂಡಿಯನ್ ವೇಲ್ಸ್ ಟೆನಿಸ್ ಟೂರ್ನಿ
ಇಂಡಿಯನ್‌ವೇಲ್ಸ್, ಮಾ.13: ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಆಂಜೆಲಿಕ್ ಕರ್ಬರ್, ನಾಲ್ಕನೆ ಶ್ರೇಯಾಂಕದ ಗಾರ್ಬೈನ್ ಮುಗುರುಝ ಹಾಗೂ ಸ್ಪೇನ್‌ನ ಸ್ಟಾರ್ ಆಟಗಾರ್ತಿ ಕಾರ್ಲ ಸುಯರೆಝ್ ಇಂಡಿಯನ್ ವೇಲ್ಸ್ ಹಾರ್ಡ್‌ಕೋರ್ಟ್ ಟೆನಿಸ್ ಟೂರ್ನಿಯಲ್ಲಿ ಮೊದಲನೆ ಸುತ್ತಿನಲ್ಲಿ ಎಡವಿದ್ದಾರೆ.
ಶನಿವಾರ ನಡೆದ ಮಹಿಳೆಯರ ಸಿಂಗಲ್ಸ್ ಪಂದ್ಯದಲ್ಲಿ ವಿಶ್ವದ ನಂ.2ನೆ ಆಟಗಾರ್ತಿ ಕರ್ಬರ್ ಝೆಕ್‌ನ ಡೆನಿಸಾ ಅಲೆರ್ಟೊವಾ ವಿರುದ್ಧ 7-5, 7-5 ನೇರ ಸೆಟ್‌ಗಳಿಂದ ಸೋತಿದ್ದಾರೆ.
ಕರ್ಬರ್ ಜನವರಿಯಲ್ಲಿ ನಡೆದ ಆಸ್ಟ್ರೇಲಿಯನ್ ಓಪನ್ ಫೈನಲ್‌ನಲ್ಲಿ ವಿಶ್ವದ ನಂ.1 ಆಟಗಾರ್ತಿ ಸೆರೆನಾ ವಿಲಿಯಮ್ಸ್‌ರನ್ನು ಮಣಿಸಿ ಚೊಚ್ಚಲ ಗ್ರಾನ್‌ಸ್ಲಾಮ್ ಪ್ರಶಸ್ತಿ ಜಯಿಸಿದ್ದರು. ಆದರೆ, ಡಬ್ಲ್ಯುಟಿಎ ಟೂರ್‌ನಲ್ಲಿ ನೀಡುತ್ತಿರುವ ಅನಿಶ್ಚಿತ ಪ್ರದರ್ಶನ ಕರ್ಬರ್ ಎದುರಿಸುತ್ತಿರುವ ದೊಡ್ಡ ಸಮಸ್ಯೆಯಾಗಿದೆ. ಆಸ್ಟ್ರೆಲಿಯದಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಕರ್ಬರ್ ದೋಹಾದಲ್ಲಿ ಮೊದಲ ಸುತ್ತಿನಲ್ಲೇ ಎಡವಿದ್ದರು.
ಇದೀಗ ಸತತ ಮೂರನೆ ವರ್ಷ ಇಂಡಿಯನ್ ವೇಲ್ಸ್‌ನ ಮೊದಲ ಸುತ್ತಿನಲ್ಲಿ ಎಡವಿದ್ದಾರೆ. ವಿಂಬಲ್ಡನ್ ಟೂರ್ನಿಯ ಫೈನಲಿಸ್ಟ್ ಮುಗುರುಝ ಅಮೆರಿಕದ ಕ್ರಿಸ್ಟಿನಾ ಮೆಕಾಲೆ ವಿರುದ್ಧ 7-5, 6-1 ಸೆಟ್‌ಗಳಿಂದ ಸೋತಿದ್ದಾರೆ. ಆರನೆ ಶ್ರೇಯಾಂಕಿತೆ ಸುಯರೆಝ್ ನವಾರ್ರೊ ಮೊದಲ ಸುತ್ತಿನ ಪಂದ್ಯ ಆರಂಭವಾಗುವ ಕೆಲವೇ ನಿಮಿಷದ ಮೊದಲು ಮಂಡಿನೋವಿನ ಕಾರಣದಿಂದ ಟೂರ್ನಿಯಿಂದ ಹಿಂದೆ ಸರಿದರು.
ಮರ್ರೆ ಗೆಲುವಿನಾರಂಭ:
ಪುರುಷರ ಸಿಂಗಲ್ಸ್ ವಿಭಾಗದಲ್ಲಿ ವಿಶ್ವದ ನಂ.2ನೆ ಆಟಗಾರ ಆ್ಯಂಡಿ ಮರ್ರೆ ಸ್ಪೇನ್‌ನ ಮಾರ್ಸೆಲ್ ಗ್ರಾನೊಲ್ಲರ್ಸ್‌ರನ್ನು 6-4, 7-6(7/3) ಸೆಟ್‌ಗಳ ಅಂತರದಿಂದ ಮಣಿಸಿ ಇಂಡಿಯನ್ ವೇಲ್ಸ್ ಟೂರ್ನಿಯಲ್ಲಿ ಶುಭಾರಂಭ ಮಾಡಿದರು.
ಆಸ್ಟ್ರೇಲಿಯನ್ ಓಪನ್ ಫೈನಲ್‌ನಲ್ಲಿ ವಿಶ್ವದ ನಂ.1 ಆಟಗಾರ ನೊವಾಕ್ ಜೊಕೊವಿಕ್ ವಿರುದ್ಧ ಸೋತ ನಂತರ ಮರ್ರೆ ಐದನೆ ಎಟಿಪಿ ಟೂರ್ ಟೂರ್ನಿಯಲ್ಲಿ ಭಾಗವಹಿಸುತ್ತಿದ್ದಾರೆ. 2009ರಲ್ಲಿ ಇಂಡಿಯನ್ ವೇಲ್ಸ್ ಟೂರ್ನಿಯಲ್ಲಿ ಫೈನಲ್‌ಗೆ ತಲುಪಿ ರಫೆಲ್ ನಡಾಲ್‌ಗೆ ಸೋತಿರುವ ಮರ್ರೆ ಮುಂದಿನ ಸುತ್ತಿನಲ್ಲಿ ಫೆಡೆರಿಕೊ ಡೆಲ್ಬೊನಿಸ್‌ರನ್ನು ಎದುರಿಸಲಿದ್ದಾರೆ. ಡೆಲ್ಬೊನಿಸ್ ಅವರು ಮತ್ತೊಂದು ಪಂದ್ಯದಲ್ಲಿ ಜಾವೊ ಸೌಸರನ್ನು 7-6(8/6), 6-4 ಅಂತರದಿಂದ ಸೋಲಿಸಿದ್ದರು.
ಇಲಿಯ ಮರ್ಚೆಂಕೊರನ್ನು 6-3, 6-2 ಸೆಟ್‌ಗಳ ಅಂತರದಿಂದ ಮಣಿಸಿರುವ ಫ್ರೆಂಚ್ ಓಪನ್ ಚಾಂಪಿಯನ್ ಸ್ಟಾನ್ ವಾವ್ರಿಂಕ ಮೂರನೆ ಸುತ್ತಿಗೆ ತೇರ್ಗಡೆಯಾಗಿದ್ದಾರೆ. 3ನೆ ಶ್ರೇಯಾಂಕದ ವಾವ್ರಿಂಕ ಮುಂದಿನ ಸುತ್ತಿನಲ್ಲಿ ರಶ್ಯದ ಆ್ಯಂಡ್ರೆ ಕುಝ್ನೆಸೋವ್‌ರನ್ನು ಎದುರಿಸಲಿದ್ದಾರೆ.
ಝೆಕ್‌ನ ಥಾಮಸ್ ಬೆರ್ಡಿಕ್,ಕೆನಡಾದ ಮಿಲೊಸ್ ರಾವೊನಿಕ್ ಹಾಗೂ ರಿಚರ್ಡ್ ಗಾಸ್ಕಟ್ ಜಯಭೇರಿ ಬಾರಿಸಿದ್ದಾರೆ. ಬೆರ್ಡಿಕ್ ಅವರು ಮಾರ್ಟಿನ್ ಡೆಲ್ ಪೊಟ್ರೊರನ್ನು 7-6(7/4), 6-2 ಸೆಟ್‌ಗಳಿಂದಲೂ, ರಾವೊನಿಕ್ ಅವರು ಇನಿಗೊ ಸೆವಂಟೆಸ್ ಹೂಗುನ್‌ರನ್ನು 6-1, 6-3 ಅಂತರದಿಂದಲೂ, ರಿಚರ್ಡ್ ಅವರು ನಿಕೊಲಸ್ ಮಹುತ್‌ರನ್ನು 6-4, 6-1 ಸೆಟ್‌ಗಳಿಂದ ಸೋಲಿಸಿದ್ದಾರೆ.







