ವಿಜಯ ಮಲ್ಯರ ಕಳಂಕದಲ್ಲಿ ಪಾಲು ಕೇಳುತ್ತಿರುವ ಗೌಡರು!
‘ವಿಜಯ ಮಲ್ಯ ಕರ್ನಾಟಕದ ಮಣ್ಣಿನ ಮಗ’ ಹೀಗೆಂದು ಯಾರೋ ಪುಡಿ ರಾಜಕಾರಣಿ ಹೇಳಿಕೆ ನೀಡಿದ್ದಿದ್ದರೆ ಅದನ್ನು ನಿರ್ಲಕ್ಷಿಸಬಹುದಿತ್ತು. ಆದರೆ ಮಾಜಿ ಪ್ರಧಾನಿ ದೇವೇಗೌಡರಿಂದ ಇಂತಹದೊಂದು ಅಣಿಮುತ್ತು ಹೊರಬಿದ್ದಿದೆ. ಸ್ವಯಂಘೋಷಿತ ಮಣ್ಣಿನ ಮಗ ದೇವೇಗೌಡರು, ಇದೀಗ ಅದೇ ಮಣ್ಣನ್ನು ವಿಜಯ ಮಲ್ಯ ಅವರ ಮುಖಕ್ಕೂ ಸವರಿದ್ದಾರೆ. ಈ ದೇಶಕ್ಕೆ ಸಾವಿರಾರು ಕೋಟಿ ರೂಪಾಯಿಯನ್ನು ವಂಚಿಸಿ, ಇದೀಗ ವಿದೇಶದಲ್ಲಿ ತಲೆಮರೆಸಿಕೊಂಡಿರುವ ವಿಜಯಮಲ್ಯ ಅವರನ್ನು ಕರ್ನಾಟಕದ ಮಣ್ಣಿನ ಮಗ ಎಂದು ಕರೆದು, ಕಳಂಕವನ್ನು ತನ್ನ ಮೈಮೇಲೆ ಎಳೆದುಕೊಂಡದ್ದೇ ಅಲ್ಲ, ಅಖಂಡ ಕರ್ನಾಟಕದ ಮುಖಕ್ಕೂ ಅದನ್ನು ಒರೆಸಲು ಹೊರಟಿದ್ದಾರೆ ದೇವೇಗೌಡರು. ಅವರ ಮಾತಿನ ಪ್ರಕಾರ ವಿಜಯ ಮಲ್ಯ ಅಮಾಯಕ. ವ್ಯವಹಾರದಲ್ಲಿ ಏರು ಪೇರು ಸಹಜ, ಮಲ್ಯ ಈ ದೇಶಕ್ಕೆ ವಂಚನೆ ಮಾಡಿಲ್ಲ, ಅವರು ಆರೋಪವನ್ನು ಕಾನೂನು ಪ್ರಕಾರ ಎದುರಿಸಲಿದ್ದಾರೆ ಎಂದೆಲ್ಲ ದೇವೇಗೌಡರು ವಕಾಲತು ವಹಿಸಿದ್ದಾರೆ. ಈ ನಾಡಿನ ರೈತರ ಸಾಲಮನ್ನಾ ವಿಷಯದಲ್ಲೂ ದೇವೇಗೌಡರು ಇಷ್ಟು ಆಪ್ತವಾಗಿ, ಪ್ರೀತಿಯಿಂದ ಮಾತನಾಡಿದ್ದಿಲ್ಲ. ಇದೇ ಸಂದರ್ಭದಲ್ಲಿ ಮಲ್ಯ ಅವರನ್ನು ರಾಜ್ಯಸಭೆಗೆ ಕಳುಹಿಸುವಲ್ಲಿ ಜೆಡಿಎಸ್‌ನ ಪಾತ್ರ ಮಾತ್ರ ಇದ್ದುದಲ್ಲ ಎಂದೂ ಸಾಬೀತು ಪಡಿಸಲು ಯತ್ನಿಸಿದ್ದಾರೆ. ರೈತರ ಹೆಸರಿನಲ್ಲಿ ರಾಜಕೀಯ ಮಾಡಿಕೊಂಡು ಬಂದಿರುವ ದೇವೇಗೌಡರು, ಇಂದು ಮಲ್ಯನಂತಹ ಸೋಗಲಾಡಿ ಉದ್ಯಮಿಯ ಪರವಾಗಿ ವಕಾಲತು ವಹಿಸುವಂತಹ ದಾರಿದ್ರಕ್ಕೆ ಇಳಿದಿರುವುದು ನಿಜಕ್ಕೂ ನಾಚಿಕೆ ಗೇಡಿನ ಸಂಗತಿ.
ಮುಖ್ಯವಾಗಿ, ವಿಜಯಮಲ್ಯ ಅವರ ಯಾವ ಸಾಧನೆಯನ್ನು ಗಮನಿಸಿ ರಾಜಕೀಯಕ್ಕೆ ಕಳುಹಿಸಿತು ಎನ್ನುವುದಕ್ಕೆ ದೇವೇಗೌಡರು ಉತ್ತರಿಸಬೇಕಾಗಿದೆ. ಸಾಧಾರಣವಾಗಿ, ವಿಧಾನಪರಿಷತ್ ಮತ್ತು ರಾಜ್ಯಸಭೆಗಳಿಗೆ ಆಯ್ಕೆ ಮಾಡುವಾಗ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವ್ಯಕ್ತಿಗಳನ್ನು, ನಾಯಕರನ್ನು ಆರಿಸಲಾಗುತ್ತದೆ.
ಕನಿಷ್ಠ ಔದ್ಯಮಿಕವಾಗಿ ಬಹುದೊಡ್ಡ ಕೊಡುಗೆ ನೀಡಿದವರನ್ನು ಆಯ್ಕೆ ಮಾಡಿದರೆ ಅದರಲ್ಲಿ ತಪ್ಪೂ ಇಲ್ಲ. ಆದರೆ ಮಲ್ಯ ಅವರನ್ನು ರಾಜ್ಯಸಭೆಗೆ ಆರಿಸಿರುವುದರಿಂದ ಈ ನಾಡಿಗೆ ಆದ ಲಾಭ ಎಳ್ಳಷ್ಟು ಇಲ್ಲ. ಬದಲಿಗೆ, ಈ ಸ್ಥಾನವನ್ನು ಬಳಸಿಕೊಂಡು ಅವರು ಬ್ಯಾಂಕುಗಳಲ್ಲಿ ಇನ್ನಷ್ಟು ಸಾಲಗಳನ್ನು ಮಾಡುವುದಕ್ಕೆ ಸಾಧ್ಯವಾಯಿತು. ಸಮಾಜದಲ್ಲಿ ಅವರ ಪ್ರತಿಷ್ಠೆ ಇನ್ನಷ್ಟು ಹೆಚ್ಚುವುದಕ್ಕೆ ಕಾರಣವಾಯಿತು. ಮಲ್ಯ ರಾಜಕೀಯ ಪ್ರವೇಶ ಮಾಡಿದ್ದೇ ಉದ್ಯಮದಲ್ಲಿ ನಷ್ಟಗಳು ಕಾಣಿಸಿಕೊಳ್ಳಲು ಶುರುವಾದಾಗ. ಆ ಹಡಗಿನ ತೂತನ್ನು ಮುಚ್ಚುವುದಕ್ಕೆ ರಾಜ್ಯಸಭೆಯನ್ನು ಬಳಸಿಕೊಂಡರು. ರಾಜಕೀಯ ಪಕ್ಷಗಳು ತಮ್ಮ ಸ್ವಾರ್ಥಕ್ಕಾಗಿ, ರಾಜ್ಯಸಭೆಯಂತಹ ಜವಾಬ್ದಾರಿಯುತ ಮೇಲ್ಮನೆಗೆ ಮಲ್ಯರಂತಹ ಶೋಕಿಲಾಲರನ್ನು ಕಳುಹಿಸಿಕೊಟ್ಟವು.
ಅದಕ್ಕಾಗಿ ಅವರು ತಮ್ಮ ಪಕ್ಷಕ್ಕೆ ಪಡೆದುಕೊಂಡ ಗಂಟೆಷ್ಟು ಎನ್ನುವುದನ್ನು ಮುಂದೊಂದು ದಿನ ಮಲ್ಯ ಅವರೇ ಮಾಧ್ಯಮಗಳಿಗೆ ಬಿಡುಗಡೆ ಮಾಡುವ ಸಾಧ್ಯತೆಗಳಿವೆ. ಇಷ್ಟಕ್ಕೂ ವ್ಯವಹಾರದಲ್ಲಿ ಮಲ್ಯ ಮುಳುಗುತ್ತಿರುವುದು, ಬ್ಯಾಂಕುಗಳಿಗೆ ಅವರು ಕೈ ಕೊಡುತ್ತಿರುವುದು ಅನಿರೀಕ್ಷಿತವೇ. ಮಲ್ಯ ನಿಜಕ್ಕೂ ಅಮಾಯಕರೇ? ಮಲ್ಯ ಅವರ ಪತನ ಒಂದು ದಶಕದ ಹಿಂದೆಯೇ ಆರಂಭವಾಗಿದೆ. ಬ್ಯಾಂಕುಗಳಿಗೆ ಹೇಗೆ ಚಳ್ಳೆ ಹಣ್ಣು ತಿನ್ನಿಸಬೇಕು ಎನ್ನುವುದಕ್ಕೆ ಅವರು ಪೂರ್ವಯೋಜನೆಯೊಂದನ್ನು ಹಲವು ವರ್ಷಗಳ ಹಿಂದೆಯೇ ತಯಾರಿಸಿದ್ದಾರೆ. ಆ ತಯಾರಿಯ ಭಾಗವಾಗಿಯೇ ಅವರು ರಾಜ್ಯಸಭೆಗೂ ಆಯ್ಕೆಯಾಗಿದ್ದಾರೆ. ಒಂದು ರೀತಿಯಲ್ಲಿ ಮಲ್ಯರ ವಿರುದ್ಧ ಬ್ಯಾಂಕುಗಳು ಕಠಿಣ ಕ್ರಮ ತೆಗೆದುಕೊಳ್ಳದೇ ಇರುವುದಕ್ಕೆ ಅವರು ರಾಜಕೀಯವಾಗಿ ಹೊಂದಿದ್ದ ಪ್ರಭಾವವೇ ಮುಖ್ಯ ಕಾರಣ. ಆದುದರಿಂದ, ಇಂದು ಮಲ್ಯ ದೇಶಕ್ಕೆ ಮಾಡಿರುವ ವಂಚನೆಯಲ್ಲಿ ಅವರನ್ನು ರಾಜ್ಯಸಭೆಗೆ ಕಳುಹಿಸಿದ ರಾಜಕಾರಣಿಗಳ ಪಾತ್ರವೂ ಇದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಅಂತೆಯೇ, ರಾಜಕಾರಣಿಗಳು ಮತ್ತು ತನಿಖಾಧಿಕಾರಿಗಳು ಜೊತೆ ಸೇರಿದರೆ ಖಂಡಿತವಾಗಿಯೂ ಮಲ್ಯ ಅವರನ್ನು ವಿದೇಶಕ್ಕೆ ತೆರಳದಂತೆ ತಡೆಯಬಹುದಿತ್ತು. ಇವರ ಅನೈತಿಕ ಸಂಬಂಧಗಳ ಕಾರಣದಿಂದಲೇ ಮಲ್ಯ ಈ ಪ್ರಮಾಣದಲ್ಲಿ ದೇಶಕ್ಕೆ ವಂಚಿಸುವುದಕ್ಕೆ ಸಾಧ್ಯವಾಯಿತು. ಇಂದು ಬಿಜೆಪಿ-ಕಾಂಗ್ರೆಸ್-ಜೆಡಿಎಸ್ ಪರಸ್ಪರ ಆರೋಪ, ಪ್ರತ್ಯಾರೋಪ ಮಾಡುತ್ತಿವೆ.
ಇದೇ ಸಂದರ್ಭದಲ್ಲಿ ಮಲ್ಯಅವರ ಮೇಲೆ ಅನಗತ್ಯ ಹೇಳಿಕೆಗಳನ್ನು ನೀಡಬಾರದು ಎಂದು ಮಾಧ್ಯಮಗಳಿಗೆ ಮತ್ತು ರಾಜಕಾರಣಿಗಳಿಗೆ ದೇವೇಗೌಡರು ಸಲಹೆ ನೀಡಿರುವುದು ಅತ್ಯಂತ ನಾಚಿಕೆಗೇಡು. ಈ ದೇಶದಲ್ಲಿ ಒಂದೆಡೆ ರೈತರು ಸಾಲ ಮಾಡಿದರೆ ಅವರ ವಿರುದ್ಧ ಬ್ಯಾಂಕುಗಳು ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳುತ್ತವೆ. ಅವರ ಟ್ರಾಕ್ಟರ್‌ಗಳನ್ನು ವಶಕ್ಕೆ ತೆಗೆದುಕೊಂಡು, ಅಥವಾ ಅವರ ಮನೆಯನ್ನು ಜಪ್ತಿ ಮಾಡಿ ಅವಮಾನಕ್ಕೆ ತಳ್ಳುತ್ತವೆ ಇದೇ ಸಂದರ್ಭದಲ್ಲಿ ಮಲ್ಯನಂತಹ ಉದ್ಯಮಿ ಸಾವಿರಾರು ಕೋಟಿ ರೂಪಾಯಿಗಳನ್ನು ದೇಶಕ್ಕೆ ವಂಚಿಸಿದರೆ, ನಮ್ಮ ನಾಯಕರು ಅವರ ಮೇಲೆ ಅನುಕಂಪ ವ್ಯಕ್ತಪಡಿಸುತ್ತಾರೆ. ಉಳಿದ ಏರ್‌ಲೈನ್ಸ್ ಕಂಪೆನಿಗಳು ಸಮರ್ಪಕವಾಗಿ ಪಾವತಿಸಿದೆಯೇ? ಎಂಬ ಬೇಜವಾಬ್ದಾರಿಯ ಪ್ರಶ್ನೆಯನ್ನು ದೇವೇಗೌಡರು ಮಾಧ್ಯಮಗಳ ಮುಂದಿಟ್ಟಿದ್ದಾರೆ. ಉಳಿದವರು ಪಾವತಿಸಿಲ್ಲ ಎನ್ನುವುದು ಮಲ್ಯ ಅವರ ವಂಚನೆಗೆ ಸಮರ್ಥನೆಯಾಗುವುದಿಲ್ಲ. ಉಳಿದವರು ಪಾವತಿಸಬೇಕು ಎಂದು ದೇವೇಗೌಡರು ಒತ್ತಾಯಿಸಲಿ. ಬೇಕಾದರೆ ಉಳಿದವರು ಎಷ್ಟೆಷ್ಟು ವಂಚಿಸಿದ್ದಾರೆ ಎನ್ನುವುದರ ಅಂಕಿ ಅಂಶವನ್ನು ದೇಶದ ಮುಂದಿಡಲಿ. ಆದರೆ ಆ ಹೆಸರಲ್ಲಿ ಮಲ್ಯರನ್ನು ರಕ್ಷಿಸುವ ಕೆಲಸ ದೇವೇಗೌಡರಂತಹ ಹಿರಿಯ ನಾಯಕರಿಗೆ ಒಪ್ಪುವಂತಹದ್ದಲ್ಲ. ‘ಮಲ್ಯ ಕರ್ನಾಟಕದ ಮಣ್ಣಿನ ಮಗ’ ಎಂದು ದೇವೇಗೌಡರು ಬಣ್ಣಿಸಿದ್ದಾರೆ. ಯಾವ ಮಣ್ಣಿನಲ್ಲಿ ಮಲ್ಯ ಮತ್ತು ದೇವೇಗೌಡರು ಜೊತೆಗೂಡಿ ರಾಗಿ ಬೆಳೆದಿದ್ದಾರೆ ಎನ್ನುವುದನ್ನು ಮಾತ್ರ ಹೇಳಿಲ್ಲ. ಕರ್ನಾಟಕ ಹೆಮ್ಮೆ ಪಡುವಂತಹ ನೂರಾರು ಜನರಿದ್ದಾರೆ. ಹಲವು ಹುತಾತ್ಮ ಯೋಧರು ಕರ್ನಾಟಕದ ಮಣ್ಣಲ್ಲಿ ಜನ್ಮ ಪಡೆದವರಾಗಿದ್ದಾರೆ. ಹಲವು ಕಲಾವಿದರು, ಕ್ರೀಡಾಳುಗಳು ಕರ್ನಾಟಕದ ಮಣ್ಣಿನ ಸಂಕೇತವಾಗಿದ್ದಾರೆ. ಅದಕ್ಕಾಗಿ ನಾವು ಹೆಮ್ಮೆ ಪಡೋಣ. ಈ ದೇಶಕ್ಕೆ ಸಾವಿರಾರು ಕೋಟಿ ರೂಪಾಯಿಗಳನ್ನು ವಂಚಿಸಿದ ಶೋಕಿಲಾಲ ಯಾವ ರೀತಿಯಲ್ಲೂ ಕರ್ನಾಟಕವನ್ನು ಪ್ರತಿನಿಧಿಸುವುದಿಲ್ಲ. ನಿಜಕ್ಕೂ ಮಲ್ಯರ ಮೇಲೆ ದೇವೇಗೌಡರಿಗೆ ಅನುಕಂಪವಿದ್ದರೆ, ಮಲ್ಯ ಕಾನೂನಿಗೆ ಶರಣಾಗಲು ಮಧ್ಯಸ್ಥಿಕೆ ವಹಿಸಲಿ. ಅಥವಾ ಆತ ಬ್ಯಾಂಕಿಗೆ ಮಾಡಿದ ಮೋಸವನ್ನು ದೇವೇಗೌಡರ ಕುಟುಂಬ ತುಂಬಿ ಕೊಡಲಿ. ಆಗ ಅವರ ಮಾತಿಗೆ ಒಂದಿಷ್ಟು ತೂಕ, ಗೌರವ ಬರುತ್ತದೆ.







