ಭಾರತ-ನ್ಯೂಝಿಲೆಂಡ್ ವಿಶ್ವಕಪ್ ಪಂದ್ಯದ ಪಿಚ್ ಬ್ಯಾಟಿಂಗ್ ಸ್ನೇಹಿ?

ನಾಗ್ಪುರ, ಮಾ.13: ಐಸಿಸಿ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಮಾ.15 ರಂದು ಆರಂಭವಾಗಲಿರುವ ಸೂಪರ್ 10 ಹಂತದ ಗ್ರೂಪ್ 2ರ ಮೊದಲನೆ ಪಂದ್ಯದ ಪಿಚ್ ಬ್ಯಾಟಿಂಗ್ ಸ್ನೇಹಿಯಾಗಿರುವ ಸಾಧ್ಯತೆಯಿದೆ.
ಕಳೆದ ವರ್ಷ ಇಲ್ಲಿನ ವಿಸಿಎ ಸ್ಟೇಡಿಯಂನಲ್ಲಿ ನಡೆದ ಭಾರತ ಹಾಗೂ ದಕ್ಷಿಣ ಆಫ್ರಿಕ ನಡುವಿನ ಮೂರನೆ ಟೆಸ್ಟ್ ಪಂದ್ಯದ ಪಿಚ್ ಬಗ್ಗೆ ತೀವ್ರ ಟೀಕೆ ವ್ಯಕ್ತವಾಗಿತ್ತು.
ಐಸಿಸಿ ಮ್ಯಾಚ್ ರೆಫರಿ ಜೆಫ್ ಕ್ರೋವ್ ತನ್ನ ವರದಿಯಲ್ಲಿ ನಾಗ್ಪುರದ ಪಿಚ್ ಅತ್ಯಂತ ಕಳಪೆ ಯಾಗಿತ್ತು ಎಂದು ಹೇಳಿದ್ದರು. ದಕ್ಷಿಣ ಆಫ್ರಿಕ ವಿರುದ್ಧ ಟೆಸ್ಟ್‌ನಲ್ಲಿ ಭಾರತ ಮೂರೇ ದಿನಗಳಲ್ಲಿ 124 ರನ್‌ಗಳ ಅಂತರದಿಂದ ಗೆದ್ದುಕೊಂಡಿತ್ತು.
ಆಫ್-ಸ್ಪಿನ್ನರ್ ಆರ್. ಅಶ್ವಿನ್ ಪಂದ್ಯದಲ್ಲಿ ಒಟ್ಟು 11 ವಿಕೆಟ್‌ಗಳನ್ನು ಕಬಳಿಸಿದ್ದರು. ಎಡಗೈ ಸ್ಪಿನ್ನರ್ ರವೀಂದ್ರ ಜಡೇಜ ಹಾಗೂ ಲೆಗ್ ಸ್ಪಿನ್ನರ್ ಅಮಿತ್ ಮಿಶ್ರಾ ವಿಕೆಟ್ ಪಡೆದಿದ್ದರು.
ಟೆಸ್ಟ್ ಪಂದ್ಯದಲ್ಲಿ ಆಗಿರುವ ಪ್ರಮಾದದಿಂದ ಎಚ್ಚೆತ್ತುಕೊಂಡಿರುವ ಬಿಸಿಸಿಐ ಭಾರತ ಹಾಗೂ ನ್ಯೂಝಿಲೆಂಡ್ ನಡುವೆ ಮಾ.15 ರಂದು ನಡೆಯಲಿರುವ ಸೂಪರ್-10ರ ಮೊದಲ ಪಂದ್ಯವನ್ನು ದಾಂಡಿಗರ ಸ್ನೇಹಿಯಾಗಿಸಲು ನಿರ್ಧರಿಸಿದೆ ಎಂದು ವಿಸಿಎ ಮೂಲಗಳು ತಿಳಿಸಿವೆ.
ಟ್ವೆಂಟಿ-20 ವಿಶ್ವಕಪ್‌ನ ಎಲ್ಲ ಪಿಚ್‌ಗಳು ದಾಂಡಿಗರ ಸ್ನೇಹಿಯಾಗಿರಬೇಕು ಎಂದು ಐಸಿಸಿ ತನ್ನ ಮಾರ್ಗಸೂಚಿಯಲ್ಲಿ ಸ್ಪಷ್ಟಪಡಿಸಿದೆ. ನಾವು ಆ ಸೂಚನೆಯನ್ನು ಕಟ್ಟುನಿಟ್ಟಾಗಿ ಪಾಲಿಸುತ್ತೇವೆ. ಈ ಪಂದ್ಯಗಳು ಟ್ವೆಂಟಿ-20 ಆಗಿದ್ದು, ಟೆಸ್ಟ್‌ಗಳಲ್ಲ ಎಂದು ಮೂಲಗಳು ತಿಳಿಸಿವೆ







