ಗಾಂಧಿ ಶಾಂತಿ ಪರೀಕ್ಷೆಗೆ ಹಾಜರಾದ 89 ಕೈದಿಗಳು

ಮುಂಬೈ,ಮಾ.13: ಬಾಂಬೆ ಸರ್ವೋ ದಯ ಮಂಡಳವು ಶನಿವಾರ ಇಲ್ಲಿ ಏರ್ಪಡಿಸಿದ್ದ ಗಾಂಧಿ ಶಾಂತಿ ಪರೀಕ್ಷೆಗೆ ಆರ್ಥರ್ ರೋಡ್ ಜೈಲಿನ 89 ಕೈದಿಗಳು ಹಾಜರಾಗಿದ್ದರು.
ಭಾರೀ ಬಿಗು ಭದ್ರತೆಯ ಅಂಡಾ ಸೆಲ್‌ನಲ್ಲಿಯ ಕೈದಿಗಳೂ ಪರೀಕ್ಷೆಗೆ ಹಾಜರಾಗಿದ್ದು, ಈ ಪೈಕಿ ಇಬ್ಬರು ನಿಗದಿತ 80 ಅಂಕಗಳ ಪೈಕಿ 79 ಅಂಕ ಗಳನ್ನು ಗಳಿಸಿದ್ದಾರೆ ಎಂದು ಮಂಡಳದ ಟಿ.ಆರ್.ಕೆ.ಸೋಮೈಯಾ ತಿಳಿಸಿದರು. ಜೈಲು ಅಧಿಕಾರಿಯೋರ್ವರು ಸಹ ಪರೀಕ್ಷೆಗೆ ಹಾಜರಾಗಿದ್ದು,ಶನಿವಾರವೇ ಫಲಿತಾಂಶ ಪ್ರಕಟಗೊಂಡಿದೆ.
ಸತ್ಯ ಮತ್ತು ಅಹಿಂಸೆಯ ನಿಜವಾದ ವೌಲ್ಯಗಳನ್ನು ಅರಿತುಕೊಂಡಿದ್ದೇನೆ. ನಾನು ಮಾಡಿದ್ದ ತಪ್ಪುಗಳನ್ನು ಅರ್ಥ ಮಾಡಿಕೊಂಡಿದ್ದೇನೆ. ಜೀವನದಲ್ಲಿ ಇನ್ನೆಂದೂ ದಾರಿ ತಪ್ದುವುದಿಲ್ಲ ಎಂದು ಅಂಡಾ ಸೆಲ್‌ನ ಕೈದಿಗಳಲ್ಲೋರ್ವ ಪರೀಕ್ಷೆಯ ಬಳಿಕ ತನ್ನ ಅನಿಸಿಕೆಯನ್ನು ವ್ಯಕ್ತಪಡಿಸಿದ.
ಬಾಂಬೆ ಸರ್ವೋದಯ ಮಂಡಳವು ಕಳೆದ 10 ವರ್ಷಗಳಿಂದಲೂ ಮಹಾ ರಾಷ್ಟ್ರದ ವಿವಿಧ ಜೈಲುಗಳಲ್ಲಿ ಗಾಂಧಿ ಶಾಂತಿ ಪರೀಕ್ಷೆಯನ್ನು ನಡೆಸುತ್ತಿದೆ.
ಈ ಅಭಿಯಾನವು ಸಂಸ್ಥೆಗೆ ಹಾಗೂ ಕೈದಿಗಳು ಮತ್ತು ವಿವಿಧ ಜೈಲುಗಳ ಅಧಿಕಾರಿಗಳ ಪಾಲಿಗೆ ಸ್ಫೂರ್ತಿದಾಯಕವಾಗಿದೆ. ಕೈದಿಗಳಲ್ಲಿ ಪಶ್ಚಾತ್ತಾಪದ ಭಾವನೆಗಳನ್ನು ಮೂಡಿಸುವುದು ಮತ್ತು ಬಿಡುಗಡೆಯ ಬಳಿಕ ಉತ್ತಮ ಪ್ರಜೆಗಳಾಗಿ ಬದುಕಲು ಅವರಲ್ಲಿ ಸತ್ಯ ಮತ್ತು ಅಹಿಂಸಾ ಗುಣಗಳನ್ನು ಮೈಗೂಡಿಸುವುದು ಈ ಪರೀಕ್ಷೆಯ ಉದ್ದೇಶವಾಗಿದೆ.





