ಬ್ಯಾಂಕ್‌ನಿಂದ ಟ್ರಾಕ್ಟರ್ ಜಪ್ತಿ: ನೊಂದ ರೈತನ ಆತ್ಮಹತ್ಯೆ
ಚೆನ್ನೈ, ಮಾ.13: ಸಾಲವನ್ನು ಮರುಪಾವತಿಸದಿದ್ದುದಕ್ಕಾಗಿ ತನ್ನ ಟ್ರಾಕ್ಟರ್‌ನ್ನು ಬ್ಯಾಂಕ್ ಮುಟ್ಟುಗೋಲು ಹಾಕಿದ್ದರಿಂದ ನೊಂದ ರೈತನೊಬ್ಬ ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿ ಕೊಂಡ ಘಟನೆ ತಮಿಳುನಾಡಿನ ತಿರುಚ್ಚಿ ಸಮೀಪ ನಡೆ ದಿದೆ. ಸಾವಿಗೆ ಶರಣಾದ ರೈತ ಎ. ಅಳಗರ್ 2013ರಲ್ಲಿ ತಿರುಚ್ಚಿಯ ಖಾಸಗಿ ಬ್ಯಾಂಕೊಂದರಿಂದ ಏಳು ಲಕ್ಷ ರೂ. ಸಾಲ ಪಡೆದಿದ್ದರು. ಅವರು ಈಗ ಎರಡು ಲಕ್ಷ ರೂ. ಸಾಲ ಬಾಕಿಯುಳಿಸಿದ್ದರು. ಅಳಗರ್ ಸಾಲ ವನ್ನು ಮರುಪಾವತಿಸಲು ವಿಫಲರಾಗಿದ್ದಾರೆಂದು ಹೇಳಿ ಕೊಂಡು, ಬ್ಯಾಂಕ್ ಅವರ ಟ್ರಾಕ್ಟರನ್ನು ಮುಟ್ಟುಗೋಲು ಹಾಕಿಕೊಂಡಿತ್ತು.
ಇದಾದ ಕೆಲವೇ ತಾಸುಗಳ ಬಳಿಕ ಆಳಗರ್ ಕೀಟನಾಶಕ ಸೇವಿಸಿದರೆಂದು ಸ್ಥಳೀಯರು ತಿಳಿಸಿದ್ದಾರೆ. ಗಂಭೀರವಾಗಿ ಅಸ್ವಸ್ಥರಾದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ವಿಫಲವಾಗಿ ಅವರು ಮಾರನೆಯ ದಿನ ಮೃತಪಟ್ಟರು. ಆದರೆ ಕುಟುಂಬವು ಪೊಲೀಸರಿಗೆ ಮಾಹಿತಿ ನೀಡದೆ ಮೃತರ ಅಂತ್ಯಕ್ರಿಯೆಯನ್ನು ನಡೆಸಿತೆನ್ನಲಾಗಿದೆ. ಸಾಲ ಮರುಪಾವತಿಸಲು ಅಳಗರ್‌ಗೆ ಆತನ ತಂದೆ ನೆರವಾಗಿದ್ದರೂ, ಅವರು ಹಣವನ್ನು ಬೇರೆ ಉದ್ದೇಶಕ್ಕೆ ಬಳಸಿದರೆೆನ್ನಲಾಗಿದೆ. ಇದು ಕುಟುಂಬದಲ್ಲಿ ವಿರಸಕ್ಕೆ ಕಾರಣವಾಗಿತ್ತು.
ಕೆಲವೇ ದಿನಗಳ ಹಿಂದೆ ಬೆಳೆವೈಫಲ್ಯದಿಂದಾಗಿ ತನ್ನ ಟ್ರಾಕ್ಟರ್ ಸಾಲವನ್ನು ತೀರಿಸಲಾಗದೆ ಇದ್ದುದಕ್ಕಾಗಿ ಪೊಲೀಸ್ ದೌರ್ಜನ್ಯಕ್ಕೊಳಗಾದ ತಮಿಳುನಾಡಿನ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದ.







