ಟೀಂ ಬಿಜೆಪಿ ಪುನಾರಚನೆಗೆ ತಡೆ

ಹೊಸದಿಲ್ಲಿ, ಮಾ.13: ಉತ್ತರಪ್ರದೇಶ ಸೇರಿದಂತೆ ಐದು ರಾಜ್ಯಗಳ ವಿಧಾನಸಭಾ ಚುನಾವಣೆಗಳು ಮುಗಿಯುವ ತನಕ ಪಕ್ಷದ ಪದಾಧಿಕಾರಿಗಳನ್ನು ಬದಲಾಯಿಸದಿರಲು ಬಿಜೆಪಿ ಅಧ್ಯಕ್ಷ ಅಮಿತ್ ಶಾ ನಿರ್ಧರಿಸಿದ್ದಾರೆ. ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗಿ ಅಮಿತ್ ಶಾ, ಈ ವರ್ಷದ ಜನವರಿ 24ರಂದು ಮೂರು ವರ್ಷಗಳ ಅವಧಿಗೆ ಆಯ್ಕೆಯಾಗಿದ್ದರು. ಪಕ್ಷದ ಸಂವಿಧಾನದ ಪ್ರಕಾರ ಅವರು ಪದಾಧಿಕಾರಿಗಳು ಹಾಗೂ ರಾಷ್ಟ್ರೀಯ ಕಾರ್ಯಕಾರಿಣಿಯ ಹೊಸ ತಂಡವನ್ನು ರಚಿಸಬೇಕಾಗಿದೆ.
ಮಾರ್ಚ್ 19,20ರಂದು ನಡೆಯಲಿರುವ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಶಾ ಅವರು ಪಕ್ಷದ ನೂತನ ಪದಾಧಿಕಾರಿಗಳ ತಂಡವನ್ನು ಪ್ರಕಟಿಸುವ ನಿರೀಕ್ಷೆಯಿತ್ತು. ಆದರೆ ಮಾರ್ಚ್ 9ರಂದು ಪ್ರಧಾನಿ ಜೊತೆ ಸಮಾ ಲೋಚನೆ ನಡೆಸಿದ ಬಳಿಕ ಅದನ್ನು ಕೈಬಿಡಲಾಯಿತೆಂದು ಹಿರಿಯ ಬಿಜೆಪಿ ನಾಯಕರೊಬ್ಬರು ತಿಳಿಸಿದ್ದಾರೆ.
ಎಪ್ರಿಲ್ ಹಾಗೂ ಮೇ ತಿಂಗಳಲ್ಲಿ ಐದು ರಾಜ್ಯಗಳಲ್ಲಿ ಚುನಾವಣೆ ನಡೆಯಲಿರುವುದರಿಂದ, ಈ ಹಂತದಲ್ಲಿ ಹೊಣೆಗಾರಿಕೆಯ ಬದಲಾವಣೆಯು ಪಕ್ಷದಲ್ಲಿ ಗೊಂದಲಕ್ಕೆ ಕಾರಣವಾಗುವ ಸಾಧ್ಯತೆಯಿರುವುದರಿಂದ ಅಮಿತ್‌ಶಾ ಪದಾಧಿಕಾರಿಗಳ ತಂಡದ ಪುನಾರಚನೆಯನ್ನು ಮುಂದೂಡಿದ್ದಾರೆನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಶಾ ಅವರು ಎರಡು-ಮೂರು ತಿಂಗಳುಗಳ ಕಾಲ ತನ್ನ ಈಗಿನ ತಂಡವನ್ನೇ ಮುಂದುವರಿಸಲಿದ್ದಾರೆ. ಪ್ರಸ್ತುತ ಪಕ್ಷದಲ್ಲಿ ಮೂರು ಉಪಾಧ್ಯಕ್ಷ ಹುದ್ದೆಗಳು ಹಾಗೂ ಎರಡು ಪ್ರಧಾನ ಕಾರ್ಯದರ್ಶಿ ಹುದ್ದೆಗಳು ತೆರವಾಗಿವೆ.
ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯು ಪಕ್ಷದ ಅಧ್ಯಕ್ಷ ಹಾಗೂ 120 ಮಂದಿ ಸದಸ್ಯರನ್ನೊಳಗೊಂಡಿದೆ. ಅವರಲ್ಲಿ ಕನಿಷ್ಠ 40 ಮಂದಿ ಮಹಿಳೆಯರು ಹಾಗೂ 12 ಮಂದಿ ಪರಿಶಿಷ್ಟ ವರ್ಗ/ ಪಂಗಡಕ್ಕೆ ಸೇರಿದವರಾಗಿರುತ್ತಾರೆ. ಗರಿಷ್ಠ 13 ಮಂದಿ ಉಪಾಧ್ಯಕ್ಷರು, 9 ಪ್ರಧಾನ ಕಾರ್ಯದರ್ಶಿಗಳು ಹಾಗೂ 15 ಕಾರ್ಯದರ್ಶಿಗಳನ್ನು ರಾಷ್ಟ್ರೀಯ ಕಾರ್ಯ ಕಾರಿಣಿಯ ಸದಸ್ಯರು ನಾಮಕರಣಗೊಳಿಸಬಹುದಾಗಿದೆ.
ಬಿಜೆಪಿಯಲ್ಲಿ ಅನುಭವಿ ನಾಯಕರ ಕೊರತೆಯು ಆರೆಸ್ಸೆಸ್‌ಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ಕೆಲವು ಸಚಿವರನ್ನು ಪಕ್ಷದ ಸಂಘಟನೆಗಾಗಿ ನಿಯೋಜಿಸುವ ಸಾಧ್ಯತೆಯಿದೆ. ಈ ಬಗ್ಗೆ ಪ್ರಧಾನಿ ಮೋದಿ ಶೀಘ್ರವೇ ನಿರ್ಧಾರವೊಂದನ್ನು ಕೈಗೊಳ್ಳಲಿದ್ದಾರೆ. ಮೇ 26ರಂದು ಮೋದಿ ಸರಕಾರವು ಎರಡು ವರ್ಷಗಳನ್ನು ಪೂರ್ತಿಗೊಳಿಸಲಿದೆ.







