‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ ಕೂಗಿದ ರವಿಶಂಕರ್ ಗುರೂಜಿ

ಹೊಸದಿಲ್ಲಿ,ಮಾ.13: ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದಲ್ಲಿ ರಾಷ್ಟ್ರವಿರೋಧಿ ಘೋಷಣೆ ಗಳ ಕುರಿತು ವಿವಾದಗಳ ನಡುವೆಯೇ ಆರ್ಟ್ ಆಫ್ ಲಿವಿಂಗ್‌ನ ಸ್ಥಾಪಕ ರವಿಶಂಕರ್ ಅವರು ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ ಘಟನೆ ವಿಶ್ವ ಸಂಸ್ಕೃತಿ ಉತ್ಸವದ ಎರಡನೆ ದಿನ ನಡೆದಿದೆ.
ಇಲ್ಲಿಯ ಯಮುನಾ ನದಿಯ ತೀರದಲ್ಲಿ ಮೂರು ದಿನಗಳ ವಿಶ್ವ ಸಂಸ್ಕೃತಿ ಉತ್ಸವದ ಎರಡನೆ ದಿನವಾಗಿದ್ದ ಶನಿವಾರ ಪಾಕಿಸ್ತಾನದ ಅತಿಥಿ ಮುಫ್ತಿ ಮುಹಮ್ಮದ್ ಸಯೀದ್ ಖಾನ್ ಅವರು ತನ್ನ ಭಾಷಣ ಮುಗಿಸಿದ ಬೆನ್ನಿಗೇ ಅವರನ್ನು ಸನ್ಮಾನಿಸಿದ ರವಿಶಂಕರ್, ‘‘ಪಾಕಿಸ್ತಾನ್ ಜಿಂದಾಬಾದ್, ಜೈ ಹಿಂದ್’’ ಎಂದು ಘೋಷಣೆ ಕೂಗಿದರು.
ಈ ಸಂದರ್ಭದಲ್ಲಿ ಗೃಹ ಸಚಿವ ರಾಜ್‌ನಾಥ್ ಸಿಂಗ್ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬಳಿಕ ತನ್ನ ಘೋಷಣೆಯನ್ನು ಸಮರ್ಥಿಸಿಕೊಂಡ ಅವರು, ಪ್ರದೇಶದಲ್ಲಿ ಶಾಂತಿ ಮತ್ತು ಅಭಿವೃದ್ಧಿಗಾಗಿ ‘ಜೈ ಹಿಂದ್ ಮತ್ತು ಪಾಕಿಸ್ತಾನ್ ಜಿಂದಾಬಾದ್ ’ಜೊತೆ ಜೊತೆಯಾಗಿ ಸಾಗಬೇಕೆಂದು ಹೇಳಿದ್ದಾರೆ.
ಜೈ ಹಿಂದ್ ಮತ್ತು ಪಾಕಿಸ್ತಾನ್ ಜಿಂದಾಬಾದ್ ಜೊತೆಯಾಗಿ ಸಾಗಬೇಕು. ಅದು ಎರಡೂ ರಾಷ್ಟ್ರಗಳಿಗೆ ಲಾಭದಾಯಕವಾಗಲಿದೆ. ಗೆಲ್ಲಲು ಮತ್ತು ಇತರರೂ ಗೆಲ್ಲುವಂತಾಗಲು ನಾವು ಗಮನವನ್ನು ಕೇಂದ್ರೀಕರಿಸಬೇಕು ಎಂದು ರವಿಶಂಕರ ಹೇಳಿದ್ದಾಗಿ ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ.
ಶನಿವಾರದ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಗಣ್ಯರಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಮತ್ತು ದಿಲ್ಲಿ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಅವರೂ ಸೇರಿದ್ದರು.







