ಮಲ್ಯ ವಿರುದ್ಧ ಜಾಮೀನುರಹಿತ ವಾರಂಟ್

ಎ.13ರೊಳಗೆ ಹಾಜರುಪಡಿಸಲು ಪೊಲೀಸರಿಗೆ ಕೋರ್ಟ್ ಆದೇಶ
ಹೊಸದಿಲ್ಲಿ, ಮಾ.13: ವಿವಿಧ ಬ್ಯಾಂಕ್‌ಗಳಿಗೆ 9 ಸಾವಿರ ಕೋಟಿ ರೂ. ಸಾಲ ಮರುಪಾವತಿಸದೆ ವಿದೇಶಕ್ಕೆ ಪರಾರಿಯಾಗಿರುವ ‘ಮದ್ಯದೊರೆ’ ವಿಜಯ ಮಲ್ಯ ಹಾಗೂ ಕಿಂಗ್‌ಫಿಶರ್ ಏರ್‌ಲೈನ್ಸ್‌ನ ಮುಖ್ಯ ಹಣಕಾಸು ಅಧಿಕಾರಿ ಎ.ರಘುನಾಥ್ ವಿರುದ್ಧ ವಂಚನೆ ಪ್ರಕರಣ ವೊಂದಕ್ಕೆ ಸಂಬಂಧಿಸಿ ಹೈದರಾಬಾದ್ ನ್ಯಾಯಾಲಯವೊಂದು ಜಾಮೀನುರಹಿತ ವಾರಂಟ್ ಜಾರಿಗೊಳಿಸಿದೆ. ಪ್ರಸ್ತುತ ಬ್ರಿಟನ್‌ನಲ್ಲಿರುವ ಮಲ್ಯರನ್ನು ಎಪ್ರಿಲ್ 13ರೊಳಗೆ ಹಾಜರುಪಡಿಸುವಂತೆ ನ್ಯಾಯಾಲಯವು ಹೈದರಾಬಾದ್ ಪೊಲೀಸರಿಗೆ ಆದೇಶಿಸಿದೆ.
ವಿಜಯ ಮಲ್ಯ ತನಗೆ ಹಣಪಾವತಿಸದೆ ವಂಚಿಸಿದ್ದಾರೆ ಹಾಗೂ ಅವರು ತನ್ನ ಹೆಸರಿನಲ್ಲಿ ನೀಡಿದ ಚೆಕ್‌ಗಳು ಅಮಾನ್ಯಗೊಂಡಿವೆಯೆಂದು ಆರೋಪಿಸಿ ಮೂಲಸೌಕರ್ಯ ನಿರ್ಮಾಣ ಸಂಸ್ಥೆ ಜಿಎಂಆರ್ ಗ್ರೂಪ್‌ನ ಹೈದರಾಬಾದ್ ಘಟಕವು ನ್ಯಾಯಾಲಯದ ಮೊರೆ ಹೋಗಿತ್ತು.
ಈ ಮಧ್ಯೆ ವಿಜಯ ಮಲ್ಯ ಒಡೆತನದ ಕಿಂಗ್‌ಫಿಶರ್ ಏರ್‌ಲೈನ್ಸ್ 8 ಕೋಟಿ ರೂ.ಗಳನ್ನು ಪಾವತಿಸದೆ ಬಾಕಿಯುಳಿಸಿದ್ದಕ್ಕಾಗಿ ಅದರ ವಿರುದ್ಧ ಜಿಎಂಆರ್ ಗ್ರೂಪ್ 11 ಪ್ರಕರಣಗಳನ್ನು ದಾಖಲಿಸಿದೆ.

ಕಿಂಗ್‌ಫಿಶರ್ ಏರ್‌ಲೈನ್ಸ್ ನೀಡಿದ 50 ಲಕ್ಷ ರೂ. ವೌಲ್ಯದ ಚೆಕ್ ಅಮಾನ್ಯಗೊಂಡಿರುವ ಹಿನ್ನೆಲೆಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಈ ಹಿಂದೆ ಅರ್ಜಿಯ ಆಲಿಕೆ ನಡೆಸಿದ ನ್ಯಾಯಾಲಯವು ಮಲ್ಯ, ಕಿಂಗ್‌ಫಿಶರ್ ಏರ್‌ಲೈನ್ಸ್‌ನ ಮುಖ್ಯ ಹಣಕಾಸು ಅಧಿಕಾರಿ ಎ.ರಘುನಾಥ್ ತನ್ನ ಮುಂದೆ ಮಾರ್ಚ್ 10ರೊಳಗೆ ಹಾಜರಾಗುವಂತೆ ತಿಳಿಸಿತ್ತು.
ಆದರೆ ಇವರಲ್ಲಿ ಯಾರೂ ಕೂಡಾ ಹಾಜರಾಗಲಿಲ್ಲ. ತಮ್ಮ ಕಕ್ಷಿದಾರರಿಗೆ ಇನ್ನೂ ಸ್ವಲ್ಪ ಕಾಲಾವಕಾಶ ನೀಡುವಂತೆ ಮಲ್ಯ ಅವರ ವಕೀಲರು ಕೋರಿದ್ದರು. ಮಲ್ಯ ಅವರಿಗೆ ಶೋಧ ನೋಟಿಸ್ ಜಾರಿಗೊಳಿಸಿದ ಹೊರತಾಗಿಯೂ ಅವರು ದೇಶಬಿಟ್ಟು ತೆರಳಿರುವುದರಿಂದ ಅವರ ವಿರುದ್ಧ ಜಾಮೀನುರಹಿತ ಬಂಧನ ವಾರಂಟ್ ಜಾರಿಗೊಳಿಸಬೇಕೆಂದು ಜಿಎಂಆರ್ ಗ್ರೂಪ್‌ನ ವಕೀಲರು ವಾದಿಸಿದ್ದರು.







