ಪ್ರತಿಪಕ್ಷಕ್ಕೆ ನಾನೇ ಗುರಿ: ಸೊರಕೆ
ಪಡುಬಿದ್ರೆ, ಮಾ.13: ಕೆಲವೊಂದು ವಿಚಾರಗಳ ಬಗ್ಗೆ ಗೊಂದಲ ಸೃಷ್ಟಿಸುವ ಬಿಜೆಪಿಗೆ ಯಾವುದೇ ರೀತಿಯ ಮತಕೇಳುವ ನೈತಿಕತೆ ಇಲ್ಲ. ಕಾಂಗ್ರೆಸ್ ಪಕ್ಷ ಅಭಿವೃದ್ಧಿಯೊಂದಿಗೆ ಮತಗಳನ್ನು ಕೇಳುತ್ತಿವೆ. ಕಾಪು ಕ್ಷೇತ್ರ ಸಹಿತ ಜಿಲ್ಲೆಯ ಅಭಿವೃದ್ಧಿಗೆ ನಾನು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ. ಆದರೂ ಇದನ್ನು ಸಹಿಸದ ಪ್ರತಿಪಕ್ಷ ನನ್ನನ್ನೇ ಗುರಿ ಮಾಡುತ್ತಿವೆ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ್ ಸೊರಕೆ ಹೇಳಿದರು. ಪಲಿಮಾರಿನಲ್ಲಿ ಕಾಂಗ್ರೆಸ್ ಸ್ಥಾನೀಯ ಸಮಿತಿ ರವಿವಾರ ಆಯೋಜಿಸಿದ ತಾಪಂ ಚುನಾವಣೆಯಲ್ಲಿ ಜಯಗಳಿಸಿದ ದಿನೇಶ್ ಕೋಟ್ಯಾನ್‌ರಿಗೆ ಹಾಗೂ ಕಾಂಗ್ರೆಸ್ ಕಾರ್ಯಕರ್ತರಿಗೆ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸ್ಥಾನೀಯ ಸಮಿತಿ ಅಧ್ಯಕ್ಷ ಗೋಪಾಲ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಅಧ್ಯಕ್ಷ ಜಿತೇಂದ್ರ ಪುರ್ಟಾಡೊ, ಪಡುಬಿದಿರೆ ವ್ಯವಸಾಯ ಸಹಕಾರಿ ಬ್ಯಾಂಕ್ ಅಧ್ಯಕ್ಷ ವೈ.ಸುಧೀರ್, ನವೀನ್‌ಚಂದ್ರ ಸುವರ್ಣ ಅಡ್ವೆ, ಕಾಪು ಬ್ಲಾಕ್ ಹಿಂದುಳಿದ ವಿಭಾಗದ ಅಧ್ಯಕ್ಷ ದೀಪಕ್ ಕುಮಾರ್ ಎರ್ಮಾಳು, ಕರುಣಾಕರ ಶೆಟ್ಟಿ, ಗ್ರಾಪಂ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.





