ಚಡ್ಡಿಯಿಂದ ಪ್ಯಾಂಟ್ ಸಂಸ್ಕೃತಿಗೆ ಬದಲಾದ ಆರೆಸ್ಸೆಸ್

ನಾಗಪುರ,ಮಾ.13: ಕಳೆದ 91 ವರ್ಷಗಳಿಂದಲೂ ಆರೆಸ್ಸೆಸ್‌ನ ಟ್ರೇಡ್ ಮಾರ್ಕ್ ಆಗಿರುವ ಖಾಕಿ ಚಡ್ಡಿ ಇತಿಹಾಸದ ಪುಟಗಳನ್ನು ಸೇರಲಿದ್ದು ಅದರ ಬದಲಾಗಿ ಕಂದು ಬಣ್ಣದ ಪ್ಯಾಂಟ್‌ಗಳು ಬರಲಿವೆ. ಇಲ್ಲಿ ನಡೆದ ಮೂರು ದಿನಗಳ ಅಖಿಲ ಭಾರತೀಯ ಪ್ರತಿನಿಧಿ ಸಭಾದ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರೆಸ್ಸೆಸ್‌ನ ಪ್ರಧಾನ ಕಾರ್ಯದರ್ಶಿ ಸುರೇಶ ಜೋಶಿ ಅವರು ಈ ವಿಷಯವನ್ನು ತಿಳಿಸಿದರು.
1925ರಲ್ಲಿ ಆರೆಸ್ಸೆಸ್ ಸ್ಥಾಪನೆಯಾದಾಗಿನಿಂದಲೂ ದೊಗಳೆ ಖಾಕಿ ಚಡ್ಡಿ ಕಾರ್ಯಕರ್ತರ ಟ್ರೇಡ್ ಮಾರ್ಕ್ ಆಗಿದೆ. ಸಮವಸ್ತ್ರದ ಇತರ ಭಾಗಗಳು ಆಗಾಗ್ಗೆ ಬದಲಾಗಿದ್ದರೂ ಖಾಕಿ ಚಡ್ಡಿ ಮಾತ್ರ ಹಾಗೆಯೇ ಉಳಿದುಕೊಂಡು ಬಂದಿತ್ತು.
1940ರವರೆಗೂ ಖಾಕಿ ಶರ್ಟ್ ಮತ್ತು ಖಾಕಿ ಚಡ್ಡಿ ಆರೆಸ್ಸೆಸ್‌ನ ಸಮವಸ್ತ್ರ ವಾಗಿತ್ತು. ಬಳಿಕ ಬಿಳಿಯ ಬಣ್ಣದ ಶರ್ಟ್ ಚಾಲ್ತಿಗೆ ಬಂದಿತ್ತು.
ಅಂತೆಯೇ 1973ರಲ್ಲಿ ಲಾಂಗ್ ಬೂಟುಗಳ ಬದಲು ಚರ್ಮದ ಶೂ,ಬಳಿಕ ರೆಕ್ಸಿನ್ ಶೂ ಬಳಕೆಗೆ ಅನುಮತಿ ನೀಡಲಾಗಿತ್ತು. ಇದೊಂದು ಪ್ರಮುಖ ಬದಲಾವಣೆ ಎಂದು ಬಣ್ಣಿಸಿದ ಜೋಶಿ, ಇಂದಿನ ಸಾಮಾಜಿಕ ಜೀವನದಲ್ಲಿ ಪ್ಯಾಂಟ್ ಸರ್ವೇಸಾಮಾನ್ಯವಾಗಿದೆ. ಅದಕ್ಕನುಗುಣವಾಗಿ ನಾವು ನಿರ್ಧಾರವನ್ನು ಕೈಗೊಂಡಿದ್ದೇವೆ ಎಂದರು.





