ಆರ್‌ಟಿಐ ಅರ್ಜಿಗೆ ಉತ್ತರಿಸುವುದು ಸಚಿವರ ಹೊಣೆ
ಮಾಹಿತಿ ಹಕ್ಕು ಆಯೋಗದ ಮಹತ್ವದ ಆದೇಶ
ಹೊಸದಿಲ್ಲಿ, ಮಾ.13: ಕೇಂದ್ರ ಹಾಗೂ ರಾಜ್ಯ ಸರಕಾರದ ಸಂಪುಟಗಳ ಸಚಿವರು, ‘‘ಸಾರ್ವಜನಿಕ ಅಧಿಕಾರಿಗಳಾಗಿದ್ದು’’, ಮಾಹಿತಿ ಹಕ್ಕು ಕಾಯ್ದೆಯಡಿ ನಾಗರಿಕರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಲು ಅವರು ಬಾಧ್ಯಸ್ಥರಾಗಿದ್ದಾರೆಂದು ಕೇಂದ್ರ ಮಾಹಿತಿ ಆಯೋಗವು ತಿಳಿಸಿದೆ.
ಮಾಹಿತಿ ಆಯೋಗದ ಈ ಆದೇಶದಿಂದಾಗಿ, ಸಾರ್ವಜನಿಕರು ಆರ್‌ಟಿಐ ಅರ್ಜಿಯನ್ನು ಸಲ್ಲಿಸುವ ಮೂಲಕ ತಮ್ಮ ಪ್ರಶ್ನೆಗಳನ್ನು ನೇರವಾಗಿ ಸಂಬಂಧಪಟ್ಟ ಸಚಿವರಿಗೆ ಕಳುಹಿಸಿಕೊಡಬಹುದಾಗಿದೆ. ಅವುಗಳಿಗೆ ಸಚಿವರ ಕಾರ್ಯಾಲಯದಲ್ಲಿರುವ ಸಾರ್ವಜನಿಕ ಮಾಹಿತಿ ಅಧಿಕಾರಿಯು ಉತ್ತರಿಸಬೇಕಾಗುತ್ತದೆ.
ಆರ್‌ಟಿಐ ಅರ್ಜಿಯಡಿ ಸಾರ್ವಜನಿಕರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಲು ಅಧಿಕಾರಿಗಳ ನಿಯೋಜನೆ ಅಥವಾ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಹಾಗೂ ಪ್ರಥಮ ಮೇಲ್ಮನವಿ ಅಧಿಕಾರಿಗಳ ನೇಮಕ ಇತ್ಯಾದಿ ಸೌಲಭ್ಯಗಳನ್ನು ಒದಗಿಸುವಂತೆ ಆಯೋಗವು ಕೇಂದ್ರ ಹಾಗೂ ರಾಜ್ಯಗಳಿಗೆ ಬಲವಾಗಿ ಶಿಫಾರಸು ಮಾಡಿದೆ. ಸಚಿವರುಗಳ ಗೌಪ್ಯತೆಯ ಪ್ರತಿಜ್ಞೆಯು ಪಾರದರ್ಶಕತೆಯನ್ನು ಕಾಯ್ದುಕೊಳ್ಳುವ ಪ್ರತಿಜ್ಞೆಯಾಗಿ ಮಾರ್ಪಡಿಸಬೇಕು. ಆ ಮೂಲಕ ಪ್ರತಿಯೊಬ್ಬ ಸಚಿವರೂ ನಾಗರಿಕರ ಹಕ್ಕುಗಳನ್ನು ಗೌರವಿಸುವಂತಾಗುತ್ತದೆ ಎಂದು ಮಾಹಿತಿ ಆಯುಕ್ತರು ಅಭಿಪ್ರಾಯಿಸಿದ್ದಾರೆ.
ಅಹ್ಮದ್‌ನಗರದ ನಿವಾಸಿ ಹೇಮಂತ್ ಧಾಗೆ ಎಂಬವರು ಕೇಂದ್ರ ಕಾನೂನು ಹಾಗೂ ನ್ಯಾಯಾಂಗ ಸಚಿವ ಹಾಗೂ ಸಹಾಯಕ ಸಚಿವರ ಸಾರ್ವಜನಿಕ ಭೇಟಿಯ ಸಮಯದ ಬಗ್ಗೆ ಅವರ ಸಿಬ್ಬಂದಿ ಮಾಹಿತಿಯನ್ನು ಕೋರಿದ್ದರು. ಈ ಬಗ್ಗೆ ಇಲಾಖೆಯಿಂದ ಯಾವುದೇ ಉತ್ತರ ದೊರೆಯದಿದ್ದಾಗ ಅವರು ಕೇಂದ್ರ ಮಾಹಿತಿ ಆಯೋಗಕ್ಕೆ ದೂರು ನೀಡಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಮಾಹಿತಿ ಆಯುಕ್ತ ಆಚಾರ್ಯಲು, ನೇರವಾಗಿ ಸಚಿವರಿಂದಲೇ ಮಾಹಿತಿಯನ್ನು ಪಡೆಯುವಂತೆ ಧಾಗೆಯವರಿಗೆ ಸೂಚನೆ ನೀಡಿದ್ದಾರೆ.





