ಮಿನಿ ಮ್ಯಾರಥಾನ್: ನಿಟ್ಟೆಯ ಚಿದಾನಂದ, ರಕ್ಷಿತಾಗೆ ಪ್ರಶಸ್ತಿ

ಉಡುಪಿ, ಮಾ.13: ಉಡುಪಿ ಇನ್‌ಸ್ಟಿಟ್ಯೂಟ್ ಆಫ್ ಸ್ಪೋರ್ಟ್ಸ್ ನ ಆಶ್ರಯದಲ್ಲಿ ಬಿರ್ತಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಸಹಯೋಗದೊಂದಿಗೆ ರವಿವಾರ ಆಯೋಜಿಸಲಾಗಿದ್ದ ಉಡುಪಿ ಜಿಲ್ಲಾ ಮಟ್ಟದ ಮಿನಿ ಮ್ಯಾರಥಾನ್‌ನ ಪುರುಷರ ವಿಭಾಗದಲ್ಲಿ ನಿಟ್ಟೆ ಎನ್‌ಎಸ್‌ಎಎಂ ಕಾಲೇಜಿನ ಚಿದಾನಂದ ಹಾಗೂ ಮಹಿಳೆಯರ ವಿಭಾಗದಲ್ಲಿ ನಿಟ್ಟೆ ತಾಂತ್ರಿಕ ವಿದ್ಯಾಲಯದ ರಕ್ಷಿತಾ ಪ್ರಶಸ್ತಿ ಗಳಿಸಿದರು.
ಮಣಿಪಾಲ ಟೈಗರ್ ಸರ್ಕಲ್‌ನಿಂದ ಅಜ್ಜರಕಾಡು ಯುದ್ಧ ಸ್ಮಾರಕ ದವರೆಗೆ ಎಂಟು ಕಿ.ಮೀ. ದೂರದ ಮಿನಿ ಮ್ಯಾರಥಾನ್‌ನ ಪುರುಷರ ವಿಭಾಗದಲ್ಲಿ ನಿಟ್ಟೆ ಎನ್‌ಎಸ್‌ಎಎಂನ ದಿನೇಶ್ ದ್ವಿತೀಯ ಹಾಗೂ ಚೇರ್ಕಾಡಿಯ ಶಾರದಾ ಪ್ರೌಢಶಾಲೆಯ ಅನಿಲ್ ತೃತೀಯ ಸ್ಥಾನ ಪಡೆದರು.
ಮಹಿಳಾ ವಿಭಾಗದಲ್ಲಿ ಚೇರ್ಕಾಡಿ ಆರ್.ಕೆ.ಪಾಟ್ಕರ್ ಹಿರಿಯ ಪ್ರಾಥಮಿಕ ಶಾಲೆಯ ಅಧೀಕ್ಷಾ ದ್ವಿತೀಯ ಹಾಗೂ ದೀಕ್ಷಾ ತೃತೀಯ ಸ್ಥಾನ ಗಳಿಸಿದರು. ಈ ಎರಡೂ ವಿಭಾಗದ ವಿಜೇತರಿಗೆ ಪ್ರಥಮ 5,000 ರೂ., ದ್ವಿತೀಯ 3,000 ರೂ., ತೃತೀಯ 1,500 ರೂ. ಬಹುಮಾನ ವಿತರಿಸಲಾಯಿತು. ಎರಡೂ ವಿಭಾಗಗಳಲ್ಲೂ ಏಳು ಮಂದಿಗೆ ಸಮಾಧಾನಕಾರ ಬಹುಮಾನವನ್ನು ನೀಡಲಾಯಿತು.
ಬೆಳಗ್ಗೆ ಮಣಿಪಾಲ ಟೈಗರ್ ಸರ್ಕಲ್‌ನಲ್ಲಿ ಮಿನಿ ಮ್ಯಾರಥಾನ್‌ಗೆ ಮಣಿಪಾಲ ವಿವಿಯ ಕ್ರೀಡಾ ಕಾರ್ಯದರ್ಶಿ ಡಾ.ವಿನೋದ್ ನಾಯಕ್ ಚಾಲನೆ ನೀಡಿದರು. ಅಜ್ಜರಕಾಡು ಯುದ್ಧ ಸ್ಮಾರಕದ ಬಳಿ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಶಾಸಕ ಪ್ರಮೋದ್ ಮಧ್ವರಾಜ್ ಬಹುಮಾನಗಳನ್ನು ವಿತರಿಸಿದರು.
ಅಧ್ಯಕ್ಷತೆಯನ್ನು ಸೊಸೈಟಿಯ ಅಧ್ಯಕ್ಷ ಗಂಗಾಧರ ಬಿರ್ತಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉಡುಪಿ ಡಿವೈಎಸ್ಪಿ ಕುಮಾರಸ್ವಾಮಿ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಮಧುಕರ್ ಎಸ್., ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರೋಶನ್ ಕುಮಾರ್ ಶೆಟ್ಟಿ, ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶ್ಪಾಲ್ ಸುವರ್ಣ, ವಿಜಯ ಬ್ಯಾಂಕ್‌ನ ಸಹಾಯಕ ಮಹಾಪ್ರಬಂಧಕಿ ಶಾಲಿನಿ ಶೆಟ್ಟಿ, ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಸೀತಾರಾಮ ಶೆಟ್ಟಿ, ಕಾರ್ಯದರ್ಶಿ ಕಿರಣ್ ಕುಮಾರ್, ಶುಕೂರ್ ಸಾಹೇಬ್ ಕಟಪಾಡಿ, ಕೆಂಪರಾಜ್ ಉಪಸ್ಥಿತರಿದ್ದರು.
ಸ್ಪೋರ್ಟ್ಸ್ ಸಂಸ್ಥೆಯ ಅಧ್ಯಕ್ಷ ಸಂತೋಷ್‌ಕುಮಾರ್ ಸ್ವಾಗತಿಸಿದರು. ಕಾರ್ಯದರ್ಶಿ ಶಿವಪ್ರಸಾದ್ ವಂದಿಸಿದರು. ಸತೀಶ್ ಶೆಟ್ಟಿ ಚಿತ್ರಪಾಡಿ ಕಾರ್ಯ ಕ್ರಮ ನಿರೂಪಿಸಿದರು.







