ಟ್ವೆಂಟಿ-20 ವಿಶ್ವಕಪ್: ಸೂಪರ್-10ಕ್ಕೆ ಬಾಂಗ್ಲಾದೇಶ

ಧರ್ಮಶಾಲಾ, ಮಾ.13: ಪದೇ ಪದೇ ಅಡ್ಡಿಪಡಿಸಿದ ಮಳೆಯ ನಡುವೆಯೂ ಒಮನ್ ತಂಡವನ್ನು ಡಿಎಲ್ ನಿಯಮದ ಪ್ರಕಾರ 54 ರನ್ ಅಂತರದಿಂದ ಮಣಿಸಿದ ಬಾಂಗ್ಲಾದೇಶ ತಂಡ ಟ್ವೆಂಟಿ-20 ವಿಶ್ವಕಪ್ ಕೂಟದ ಪ್ರಧಾನ ಸುತ್ತಿಗೆ(ಸೂಪರ್-10) ತಲುಪಿದೆ.
ರವಿವಾರ ವಿಶ್ವಕಪ್‌ನ ಮೊದಲ ಸುತ್ತಿನಲ್ಲಿ ಎ ಗುಂಪಿನ ಅಂತಿಮ ಪಂದ್ಯದಲ್ಲಿ 181 ರನ್ ಚೇಸಿಂಗ್‌ಗೆ ತೊಡಗಿದ ಒಮನ್ ತಂಡಕ್ಕೆ ಎರಡು ಬಾರಿ ಮಳೆ ಅಡ್ಡಿಪಡಿಸಿತು.
ಡಿಎಲ್ ನಿಯಮದಂತೆ ಒಮನ್‌ಗೆ 12 ಓವರ್‌ಗಳಲ್ಲಿ 120 ರನ್ ಪರಿಷ್ಕೃತ ಗುರಿ ನೀಡಲಾಯಿತು. ಶಾಕಿಬ್ ಅಲ್ ಹಸನ್(4-15) ದಾಳಿಗೆ ನಿರುತ್ತರವಾದ ಒಮನ್ ತಂಡ 12 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ ಕೇವಲ 65 ರನ್ ಗಳಿಸಿತು. ಜಿತಿಂದರ್ ಸಿಂಗ್(25) ಅಗ್ರ ಸ್ಕೋರರ್ ಎನಿಸಿಕೊಂಡರು
ಬಾಂಗ್ಲಾದೇಶ 180/2: ಆರಂಭಿಕ ದಾಂಡಿಗ ತಮೀಮ್ ಇಕ್ಬಾಲ್ ಶತಕದ(ಔಟಾಗದೆ 103, 63 ಎಸೆತ, 10 ಬೌಂಡರಿ, 5 ಸಿಕ್ಸರ್) ಸಹಾಯದಿಂದ ಬಾಂಗ್ಲಾದೇಶ ತಂಡ ಒಮನ್ ವಿರುದ್ಧ ವಿಶ್ವಕಪ್ ಕ್ರಿಕೆಟ್‌ನ ಮೊದಲ ಸುತ್ತಿನ ನಿರ್ಣಾಯಕ ಪಂದ್ಯದಲ್ಲಿ 20 ಓವರ್‌ಗಳಲ್ಲಿ 2 ವಿಕೆಟ್‌ಗಳ ನಷ್ಟಕ್ಕೆ 180 ರನ್ ಗಳಿಸಿದೆ.
ರವಿವಾರ ನಡೆದ ಎ ಗುಂಪಿನ ಕೊನೆಯ ಪಂದ್ಯದಲ್ಲಿ ಟಾಸ್ ಜಯಿಸಿದ ಒಮನ್ ತಂಡ ಬಾಂಗ್ಲಾದೇಶವನ್ನು ಬ್ಯಾಟಿಂಗ್‌ಗೆ ಇಳಿಸಿತು. ಶಬೀರ್ ರಹ್ಮಾನ್(44) ಅವರೊಂದಿಗೆ 2ನೆ ವಿಕೆಟ್‌ಗೆ 97 ರನ್ ಹಾಗೂ ಶಾಕಿಬ್ ಅಲ್ ಹಸನ್(17)ರೊಂದಿಗೆ 3ನೆ ವಿಕೆಟ್‌ಗೆ 41 ರನ್ ಜೊತೆಯಾಟ ನಡೆಸಿದ್ದ ಇಕ್ಬಾಲ್ ಬಾಂಗ್ಲಾದೇಶ ಉತ್ತಮ ಮೊತ್ತ ಕಲೆ ಹಾಕಲು ನೆರವಾದರು.
ಇನಿಂಗ್ಸ್ ಆರಂಭಿಸಿದ ಇಕ್ಬಾಲ್ ಹಾಗೂ ಸೌಮ್ಯ ಸರ್ಕಾರ್ ಮೊದಲ ವಿಕೆಟ್‌ಗೆ 42 ರನ್ ಸೇರಿಸಿ ಸಾಧಾರಣ ಆರಂಭ ನೀಡಿದರು.







