ಎಲ್ಲವನ್ನೂ ಓದಿ-ವಿಮರ್ಶಿಸುವುದು ಸೂಕ್ತ: ರಾಘವೇಂದ್ರ ರಾವ್
ಬೆಂಗಳೂರು, ಮಾ. 13: ಕೆಲ ಲೇಖಕರ ಸಾಹಿತ್ಯವನ್ನಷ್ಟೇ ಓದುವುದು ಸರಿಯಲ್ಲ. ಎಲ್ಲ ಲೇಖಕರ ಕೃತಿಗಳನ್ನು ಅಭ್ಯಾಸ ಮಾಡುವ ಮೂಲಕ ವಿಮರ್ಶಿಸುವ ಕೆಲಸ ಆಗಬೇಕು ಎಂದು ಖ್ಯಾತ ವಿಮರ್ಶಕ ಡಾ.ಎಚ್.ಎಸ್.ರಾಘವೇಂದ್ರ ರಾವ್ ಇಂದಿಲ್ಲಿ ಅಭಿಪ್ರಾಯಪಟ್ಟಿದ್ದಾರೆ.
ರವಿವಾರ ನಗರದ ಕಸಾಪ ಸಭಾಂಗಣ ದಲ್ಲಿ ಅನೇಕ ಹಾಗೂ ಡುಅಬಲ್ ಪ್ರಕಾಶನ ದಿಂದ ಹೊರತಂದಿರುವ ಲೇಖಕರಾದ ಎಂ.ಎಸ್.ರುದ್ರೇಶ್ವರ ಸ್ವಾಮಿ ಅವರ ‘ಅವಳ ಕವಿತೆ’ ಹಾಗೂ ವಸ್ತಾರೆ ರಚಿಸಿದ ‘ವಸ್ತಾರೆ ಇನ್ನೂ 75’ ಕೃತಿಗಳ ಲೋಕಾರ್ಪಣೆ ಮಾಡಿ ಮಾತನಾಡಿದರು.
ನಾವು ಓದುವ ಯಾವುದೇ ಸಾಹಿತ್ಯ ಪ್ರಾಮಾಣಿಕತೆಯಿಂದ ಕೂಡಿರಬೇಕು. ಯಾವುದೇ ಒಂದಕ್ಕೆ ಸೀಮಿತವಾಗದೆ ಸರ್ವ ಸಾಹಿತ್ಯ ಸಕ್ತರಾಗಿರಬೇಕು. ನಮ್ಮ ಓದು ಹಗ್ಗದ ಮೇಲೆ ನಡಿದಾಡುವ ರೀತಿಯಲ್ಲಿದ್ದು, ಇದರಿಂದ ಯುವ ಸಾಹಿತಿಗಳನ್ನು ಬೆಳೆಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಇದರಿಂದ ಹೊರಬರಬೇಕು ಎಂದು ಪ್ರತಿಪಾದಿಸಿದರು.
ನಮ್ಮ ಅಭ್ಯಾಸ ತೊಟ್ಟಿಲು ತೂಗು ವಂತೆಯೂ ಇರಬೇಕು, ಅತ್ತ ಮಗುವನ್ನು ಚಿವುಟಿ ಎಬ್ಬಿಸಿ ಜಾಗೃತಿಗೊಳಿಸುವಂತೆಯೂ ನಾವು ಸಾಹಿತ್ಯವನ್ನು ಅಭ್ಯಾಸ ಮಾಡಬೇಕು ಎಂದ ವಿಶ್ಲೇಷಿಸಿದ ಅವರು, ಆ ಮೂಲಕ ಯುವ ಕವಿಗಳನ್ನು ಬೆಳೆಸಲು ಸಹಕಾರಿಯಾಗಬೇಕು ಎಂದು ಹೇಳಿದರು.
ಸಮಕಾಲೀನ ಕವಿಗಳುತಮ್ಮದೇ ಆದ ಓದುಗ ವರ್ಗವನ್ನು ಗುರುತಿಸಿ ಕೊಳ್ಳುತ್ತಿದ್ದರೂ, ಯುವ ಕವಿಗಳು ಇನ್ನೂ ಆ ಮಟ್ಟಕ್ಕೆ ಬೆಳೆಯಲು ಸಾಧ್ಯ ಆಗುತ್ತಿಲ್ಲ. ಆದುದರಿಂದ ಎರಡು ಕಂಬಗಳ ಮಧ್ಯೆ ನಿಂತು ಹೋಗದೆ ಓದುಗರು ಬಹುಮುಖತ್ವವನ್ನು ಅಭ್ಯಾಸ ಮಾಡಿ, ಅದನ್ನು ವಿಮರ್ಶಿಸಿ ಹೊಸ ಸಾಹಿತ್ಯವನ್ನು ಬೆಳೆಸಬೇಕೆಂದರು.
ಹೆಣ್ಣನ್ನು ನಾವಿಂದು ಅನ್ಯಾಯ, ಶೋಷಣೆಯ ಚೌಕಟ್ಟುಗಳಲ್ಲಿ ನೋಡುವುದು ಒಂದು ಕಡೆಯಾದರೆ, ಇದನ್ನು ಅರಿತು ಚಳವಳಿಯನ್ನು ರೂಪಿಸುವುದು ಇನ್ನೊಂದು ಕಡೆ. ಆದರೆ ಇಂದು ಮಹಿಳೆಯ ಬಗ್ಗೆ ಧ್ವನಿ ಎತ್ತುವಾಗ ಆ ಪ್ರಯತ್ನಗಳಿಂದ ನಾವು ನೋಡುವ ವಸ್ತುಸ್ಥಿತಿ ಬದಲಾಯಿಸುವುದೇ ಎಂಬುದು ಮುಖ್ಯ. ಕಾರ್ಪೋರೇಟ್ ಜಗತ್ತು ಹೆಣ್ಣನ್ನು ವ್ಯಾಪಾರ ವಸ್ತುವನ್ನಾಗಿ ಮಾಡಿದಾಗ ಅದು ನೀಡಿದ ವಿಷಾದದಿಂದ ಹೆಣ್ಣನ್ನು ಹೊಸ ಜಗತ್ತು ಆವರಿಸಿಕೊಂಡಿತು. ಹೀಗಾಗಿ ಹೆಣ್ಣಿಗೆ ಸಂಕಟ ಮತ್ತು ವಿಷಾದ ನಿರಂತರ ಎಂದು ರಾಘವೇಂದ್ರ ರಾವ್ ತಿಳಿಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಡಾ.ಎಚ್.ಎಸ್.ವೆಂಟೇಶಮೂರ್ತಿ ಮಾತನಾಡಿ, ಪ್ರಾಮಾಣಿಕವಾಗಿ ಕವಿತೆಗಳನ್ನು ರಚಿಸುವಂತಹ ಕವಿಗಳು ಬೆಳೆಯುತ್ತಿರುವುದು ಕಾವ್ಯ ವಾತಾವರಣದಲ್ಲಿ ಹೊಸ ಭರವಸೆಯನ್ನು ಮೂಡಿಸಿದೆ. ಕಾವ್ಯದಲ್ಲಿ ಸ್ವಾರಸ್ಯವಿಲ್ಲ ಎಂಬ ಸುಳ್ಳನ್ನು ನಿವಾರಿಸಲು ಯುವ ಕವಿಗಳು ಮುಂದಾಗಬೇಕು ಎಂದು ಹೇಳಿದರು.
ದ.ರಾ.ಬೇಂದ್ರೆಯವರನ್ನು ಓದುವ ವರು ಅಡಿಗರನ್ನು ಓದುತ್ತಿದ್ದಾರೆ. ಅಡಿಗರನ್ನು ಓದುವವರು ಇನ್ನಿತರರನ್ನು ಓದುತ್ತಿರುವುದನ್ನು ಗಮನಿಸಿದಾಗ ಕಾವ್ಯ ವಿಮರ್ಶೆ, ಬೇಂದ್ರೆ ಕಾವ್ಯಗಳನ್ನು ಅನುಸರಿಸುತ್ತಿರುವುದು ಗೊತ್ತಾಗುತ್ತದೆ ಎಂದ ಅವರು, ಪದ್ಯ ಎಂಬುದು ಯಾವುದೇ ಮಾತಿನ ಅರ್ಥವನ್ನು ಕೆಡಿಸುತ್ತದೆಯೋ ಅದು ಪದ್ಯವಾಗಿರುತ್ತದೆ. ಇದು ಶಬ್ದಕೋದಲ್ಲಿನ ಅರ್ಥಗಳನ್ನು ಮೀರಿರುತ್ತದೆ. ಆದುದರಿಂದಲೇ ಪದ್ಯ ಹೃದಯವಂತರ ಮನೋಧರ್ಮವಾಗಿದೆ ಎಂದರು.
ಮಾತನ್ನು ನಂಬಿದವರಿಗೆ ಮಾತು ನಿಜವಾಗಲಾರದು, ಹಾಗೆಯೆ ಪದ್ಯವನ್ನು ನಂಬಿದವರು ಪದ್ಯವನ್ನು ಕಟ್ಟಲು ಸಾಧ್ಯವಿಲ್ಲ. ಇದನ್ನು ಸಾಧಿಸಿದವರು ಬೇಂದ್ರೆ ಮಾತ್ರ. ಯಾವೊಬ್ಬ ಕವಿಯೂ ಶುದ್ಧಾಂಗ ಕವಿಯಾಗಿರಲು ಸಾಧ್ಯವಿಲ್ಲ. ಒಂದೇ ಕಾಲದಲ್ಲಿ ಅನೇಕ ಪಾತ್ರಗಳನ್ನು ನಿರ್ವಹಿಸುತ್ತಿರುತ್ತಾರೆ. ಹೀಗಾಗಿ ಪದ್ಯ ಎಲ್ಲ ಮುಗಿಯಿತು ಎನ್ನುವುದಕ್ಕಿಂತ ಇನ್ನೂ ಏನೋ ಇದೆ ಅನ್ನುವುದನ್ನು ಮತ್ತೆ-ಮತ್ತೆ ಹುಡುಕುವ ಪ್ರಯತ್ನ ಮಾಡುತ್ತಿರಬೇಕು ಹಾಗೂ ಬರೆಯುತ್ತಿರಬೇಕು ಎಂದು ಕಿವಿಮಾತು ಹೇಳಿದರು.







