ಮಾಜಿ ಉಲ್ಫಾ ಉಗ್ರ ಈಗ ಬಿಜೆಪಿ ಅಭ್ಯರ್ಥಿ !

ಗುವಹಾಟಿ, ಮಾ.14: ಅಸ್ಸಾಂನಲ್ಲಿ ಮುಂಬರಲಿರುವ ಅಸೆಂಬ್ಲಿ ಚುನಾವಣೆಯಲ್ಲಿ ತರುಣ್ ಗೊಗೋಯಿ ನೇತೃತ್ವದ ಕಾಂಗ್ರೆಸ್ ಸರಕಾರವನ್ನು ಮಣ್ಣು ಮುಕ್ಕಿಸಲು ಸರ್ವ ಪ್ರಯತ್ನಗಳನ್ನು ಮಾಡುತ್ತಿರುವ ಬಿಜೆಪಿ ಪೂರ್ವ ಅಸ್ಸಾಂನ ಮಾರ್ಘೆರಿಟಾ ಕ್ಷೇತ್ರದಿಂದ ಕುಖ್ಯಾತ ಮಾಜಿ ಉಲ್ಫಾ ಉಗ್ರ ಭಾಸ್ಕರ ಶರ್ಮನನ್ನು ಕಣಕ್ಕಿಳಿಸಲು ನಿರ್ಧರಿಸಿ ಸಾಕಷ್ಟು ವಿವಾದಕ್ಕೆಡೆ ಮಾಡಿಕೊಟ್ಟಿದೆ.
ಪಕ್ಷದ ಈ ನಿರ್ಧಾರ ಈಗಾಗಲೇ ನಾಗರಿಕ ಸಮಾಜ, ಸ್ಥಳೀಯ ಬಿಜೆಪಿ ಕಾರ್ಯಕರ್ತರು ಹಾಗೂ ಪರೇಶ್ ಬರುವಾ ನೇತೃತ್ವದ ಉಲ್ಫಾ ಬಣದಿಂದ ಭಾರೀ ವಿರೋಧ ಎದುರಿಸುತ್ತಿದೆ. ಭಾಸ್ಕರ ಶರ್ಮ 1998 ಹಾಗೂ 2001ರ ನಡುವೆ ಹಲವಾರು ಉಲ್ಫಾ ನಾಯಕರುಗಳ ಹತ್ಯೆಗೆ ಸಂಚು ಹೂಡಿದ್ದರು ಹಾಗೂ ಅವರೊಬ್ಬ ‘ದ್ರೋಹಿ’ ‘ಸರಣಿ ಹಂತಕ’ ಎಂದು ಪರೇಶ್ ಹಲವು ಪತ್ರಿಕೆಗಳಿಗೆ ಈಮೇಲ್ ಸಂದೇಶ ಕಳುಹಿಸಿದ್ದಾರೆ. ಮುಸುಕುಧಾರಿ ವ್ಯಕ್ತಿಗಳು ಮೇಲೆ ತಿಳಿಸಿದ ಅವಧಿಯಲ್ಲಿ ನಡೆಸಿದ ಉಲ್ಫಾ ನಾಯಕರುಗಳ ಹತ್ಯೆಗಳಲ್ಲಿ ಭಾಸ್ಕರ ಶರ್ಮ ಕೈವಾಡವಿದೆಯೆಂದೂ ಅವರು ಆರೋಪಿಸಿದ್ದಾರೆ.
ಬಿಜೆಪಿ ಭಾಸ್ಕರ ಶರ್ಮ ರನ್ನು ಕಣಕ್ಕಿಂದ ಹಿಂದೆ ಸರಿಸದೇ ಇದ್ದಲ್ಲಿನಾವು ಏನೇ ಮಾಡಲು ಹೇಸುವುದಿಲ್ಲ ಎಂದು ಉಲ್ಫಾದ ಬಣವೊಂದು ಹೇಳಿಕೊಂಡಿದೆ. ಆದರೆ ಭಾಸ್ಕರ ಶರ್ಮ ಹಣ ಬಲ ಹಾಗೂ ಸ್ನಾಯು ಬಲ ಹೊಂದಿರುವ ಓರ್ವ ಪ್ರಭಾವಿ ನಾಯಕರಾಗಿದ್ದು ಅವರನ್ನು ಬಿಜೆಪಿ ಕಣದಿಂದ ಹಿಂದಕ್ಕೆ ಸರಿಸುವ ಸಾಧ್ಯತೆಯೇ ಇಲ್ಲವೆಂದು ಹೇಳಲಾಗುತ್ತಿದೆ.
ಮಾರ್ಘೆರಿಟಾ ಕ್ಷೇತ್ರವನ್ನು 1998ರಿಂದ ಗೆಲ್ಲುತ್ತಿರುವ ಪ್ರದ್ಯೋತ್ ಬೊರ್ಡೊಲೊಯ್ ಅವರನ್ನು ಭಾಸ್ಕರ ಶರ್ಮ ಖಂಡಿತವಾಗಿಯೂ ಸೋಲಿಸಬಲ್ಲರು ಎಂಬ ಆತ್ಮವಿಶ್ವಾಸದಲ್ಲಿ ಬಿಜೆಪಿಯಿದೆ.
ಮುಖ್ಯಮಂತ್ರಿ ತರುಣ್ ಗೊಗೊಯ್ ಹಾಗೂ ಅಸ್ಸಾಂ ಗಣ ಪರಿಷದ್ ಕೂಡ ಬಿಜೆಪಿ ನಿರ್ಧಾರವನ್ನು ಟೀಕಿಸಿವೆ.







