ಆಫ್ರಿದಿಗೆ ನಾಚಿಕೆಯಾಗಬೇಕು : ಮಿಯಾಂದಾದ್ ಆಕ್ರೋಶ

ಕರಾಚಿ , ಮಾ. 14 : ಪಾಕಿಸ್ತಾನ ಕ್ರಿಕೆಟ್ ಆಟಗಾರರಿಗೆ ತವರಿಗಿಂತ ಹೆಚ್ಚು ಪ್ರೀತಿ ಭಾರತದಲ್ಲಿ ಸಿಕ್ಕಿದೆ ಎಂಬ ತಂಡದ ನಾಯಕ ಶಾಹಿದ್ ಆಫ್ರಿದಿ ಅವರ ಹೇಳಿಕೆಗೆ ಮಾಜಿ ನಾಯಕ ಜಾವೇದ್ ಮಿಯಾಂದಾದ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತನಗೆ ಈ ಹೇಳಿಕೆಯಿಂದ ತೀವ್ರ ಆಘಾತ ಹಾಗು ನೋವಾಗಿದೆ ಎಂದು ಪ್ರತಿಕ್ರಿಯಿಸಿರುವ ಮಿಯಾಂದಾದ್ ಇಂತಹ ಹೇಳಿಕೆ ನೀಡಿರುವ ಆಟಗಾರರು ತಮ್ಮ ಬಗ್ಗೆ ನಾಚಿಕೆಪಟ್ಟುಕೊಳ್ಳಬೇಕು ಎಂದು ಕಿದಿಗಾರಿದ್ದಾರೆ.
" ಭಾರತ ನಮಗೆ ಏನು ಮಾಡಿದೆ. ಕಳೆದ ಐದು ವರ್ಷಗಳಲ್ಲಿ ಅದು ನಮಗೆ ಏನು ನೀಡಿದೆ , ನಮ್ಮ ಕ್ರಿಕೆಟ್ ತಂಡಕ್ಕೆ ಏನು ಮಾಡಿದೆ ? ಭಾರತದಲ್ಲಿರುವಾಗಲೂ ಸತ್ಯವೇ ಹೇಳಬೇಕು. ನಾವು ಇಷ್ಟು ವರ್ಷಗಳಿಂದ ಪಾಕ್ ಕ್ರಿಕೆಟ್ ತಂಡಕ್ಕೆ ಸೇವೆ ಸಲ್ಲಿಸಿದ್ದು ಈಗ ತಂಡದ ಆಟಗಾರರು ಈ ರೀತಿಯ ಹೇಳಿಕೆ ನೀಡುವುದನ್ನು ಕೇಳುವಾಗ ನಮಗೆ ಆಘಾತ ಹಾಗು ನೋವಾಗಿದೆ. ಪಾಕ್ ಕ್ರಿಕೆಟ್ ಮಂಡಳಿ ಈ ಬಗ್ಗೆ ಗಮನ ಹರಿಸಬೇಕು. ವಿದೇಶಗಳಿಗೆ ಹೋಗುವಾಗ ಹೇಗೆ ಮಾಧ್ಯಮಗಳ ಜೊತೆ ವ್ಯವಹರಿಸಬೇಕೆಂದು ಆಟಗಾರರಿಗೆ ತರಬೇತಿ ನೀಡಬೇಕು" ಎಂದವರು ಹೇಳಿದ್ದಾರೆ.
ಮಾಜಿ ಆಟಗಾರ ಹಾಗು ಕೋಚ್ ಮೊಹ್ಸಿನ್ ಖಾನ್ ಕೂಡ " ಹಿರಿಯ ಆಟಗಾರರು ಭಾರತದಲ್ಲಿ ಹೇಳಿಕೆ ನೀಡುವಾಗ ಜಾಗರೂಕರಾಗಿರಬೇಕು " ಎಂದು ಹೇಳಿದ್ದಾರೆ.





