ಪುತ್ತೂರು: ಜಾತ್ರಾ ಆಮಂತ್ರಣ ಪತ್ರಿಕೆ ವಿವಾದ, ಜಿಲ್ಲಾಧಿಕಾರಿಗಳ ಸಮರ್ಥನೆ ಸರಿಯಲ್ಲ-ರಾಜೇಶ್ ಬನ್ನೂರು
ಪುತ್ತೂರು: ದೇವಾಲಯಗಳು ಎಂಡೋಮೆಂಟ್‌ನ ಪಿತ್ರಾರ್ಜಿತ ಆಸ್ತಿಯಲ್ಲ. ಇದೊಂದು ಹಿಂದೂಗಳ ಶ್ರದ್ಧಾ ಕೇಂದ್ರವಾಗಿದ್ದು, ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಮಂತ್ರಣ ಪತ್ರಿಕೆಯಲ್ಲಿ ಎಂಡೋಮೆಂಟ್ ಕಾಯಿದೆಯನ್ನು ಉಲ್ಲಂಘಿಸಿ ಹಿಂದೂಯೇತರರಾಗಿರುವ ತನ್ನ ಹೆಸರನ್ನು ಮುದ್ರಿಸಿರುವುದನ್ನು ಸಮರ್ಥಿಸಿಕೊಂಡಿರುವ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಅವರು ಜಾತ್ರೆಗೆ ಆಗಮಿಸಿ ಗಂಧ ಪ್ರಸಾದ ಸ್ವೀಕರಿಸಲು ಹಾಗೂ ದೀಪ ಹಿಡಿಯಲು ಸಿದ್ದರಿದ್ದಾರೆಯೇ? ಎಂದು ನಗರಸಭೆಯ ಸದಸ್ಯ ರಾಜೇಶ್ ಬನ್ನೂರು ಪ್ರಶ್ನಿಸಿದ್ದಾರೆ.
ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಜಾತ್ರೆಗೆ ಭಕ್ತಾದಿಗಳನ್ನು ಆಮಂತ್ರಿಸುವವರ ಸಾಲಿನಲ್ಲಿ ಎ.ಬಿ. ಇಬ್ರಾಹಿಂ ಹೆಸರಿದ್ದು, ಇದು ಎಂಡೋಮೆಂಟ್ ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದೆ. ಹಿಂದೂ ದೇವಳಗಳ ಚಟುವಟಿಕೆಯಲ್ಲಿ, ಆಡಳಿತದಲ್ಲಿ, ನಿರ್ವಹಣೆಯಲ್ಲಿ ಹಿಂದೂಯೇತರ ಅಧಿಕಾರಿಗಳು ಪಾಲು ಪಡೆಯಬಾರದು ಎಂಬ ಸ್ಪಷ್ಟತೆ ಕಾನೂನಿನಲ್ಲಿದೆ. ಆದರೂ ಪತ್ರಿಕೆಯಲ್ಲಿ ಜಿಲ್ಲಾಧಿಕಾರಿಗಳು ತನ್ನ ಹೆಸರು ಮುದ್ರಿಸಿರುವುದನ್ನು ಸಮರ್ಥಿಸಿಕೊಂಡಿದ್ದಾರೆ. ಇದು ಸರಿಯಲ್ಲ, ಎ.ಬಿ. ಇಬ್ರಾಹಿಂ ಎಂಬ ಹೆಸರನ್ನು ತೆಗೆದು ಜಾತ್ರೆಯ ಕಾಗದ ಮರುಮುದ್ರಣ ಮಾಡಬೇಕೆಂಬ ನಮ್ಮ ಆಗ್ರಹದಲ್ಲಿ ಯಾವುದೇ ರಾಜಿ ಇಲ್ಲ ಎಂದು ಸ್ಪಷ್ಠ ಪಡಿಸಿದ್ದಾರೆ. ಆಮಂತ್ರಣ ಪತ್ರಿಕೆಯನ್ನು ಮರು ಮುದ್ರಣ ಮಾಡುವಂತೆ ಶಾಸಕಿ ಶಕುಂತಳಾ ಶೆಟ್ಟಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದರೂ ಅದನ್ನು ಬೆಲೆ ಕೊಡದ ಅಧಿಕಾರಿಗಳು ತಮ್ಮ ಕೆಲಸವನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಇತರ ಧರ್ಮೀಯರು ದೇವಸ್ಥಾನಕ್ಕೆ ಬರುವುದು, ಜಾತ್ರೆಯಲ್ಲಿ ಭಾಗವಹಿಸುವುದಕ್ಕೆ ನಮ್ಮ ಆಕ್ಷೇಪಣೆ ಇಲ್ಲ. ಎಷ್ಟೋ ಧಾರ್ಮಿಕ ಶ್ರದ್ಧಾ ಕೇಂದ್ರಗಳು ಇಂದಿಗೂ ಸರ್ವ ಧರ್ಮ ಸಮನ್ವಯ ಕೇಂದ್ರಗಳಾಗಿಯೇ ಇವೆ. ಆದರೆ ಆಯಾ ಧಾರ್ಮಿಕ ಕೇಂದ್ರಗಳ ಆಡಳಿತವನ್ನು ಆಯಾ ಧರ್ಮದವರೇ ನೋಡಿಕೊಳ್ಳಬೇಕು. ಈ ನಿಯಮವನ್ನು ಉಲ್ಲಂಘನೆ ಮಾಡುವುದನ್ನು ನಾವು ವಿರೋಧಿಸುತ್ತೇವೆ ಎಂದರು.
ಕುಕ್ಕೆ ಸುಬ್ರಹ್ಮಣ್ಯ ದೇವಳದ ಜಾತ್ರೆಯಲ್ಲಿ ಜಿಲ್ಲಾಧಿಕಾರಿಗಳ ಹೆಸರನ್ನು ಮುದ್ರಿಸಲಾಗಿತ್ತು ಎಂದು ಅಧಿಕಾರಿಗಳು ಸಮರ್ಥಿಸುತ್ತಿದ್ದಾರೆ. ಅಲ್ಲಿ ಆಗಿರುವ ತಪ್ಪನ್ನು ಇಲ್ಲಿಯೂ ಮುಂದೆ ಇತರ ಕಡೆಗಳಲ್ಲಿಯೂ ಮುಂದುವರಿಸಿ ಅದೇ ಸರಿಯೆಂದು ವಾದಿಸುವುದು ಸರಿಯಲ್ಲ ಎಂದ ಅವರು ಈ ವಿಚಾರವನ್ನು ಹೀಗೇ ಮುಂದುವರಿಯಲು ಬಿಟ್ಟಲ್ಲಿ ಮುಂದೆ ಇನ್ನಿತರ ದೇವಸ್ಥಾನಗಳಲ್ಲೂ ಇದೇ ರೀತಿ ಆಗಬಹುದು ಎಂದು ಹೇಳಿದರು. ಪ್ರಸ್ತುತ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಕಾರ್ಯ ನಿರ್ವಹಣಾ ಅಧಿಕಾರಿ ಆಗಿರುವವರು ಹಿಂದೂ ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟ ಅಧಿಕಾರಿಯಾಗಿದ್ದು, ಇವರು ದೇವಾಲಯಗಳ ಅಧಿಕಾರಿ ಆಗಬಹುದೇ ಹೊರತು ಬೇರೆ ಧರ್ಮಗಳ ಶ್ರದ್ಧಾ ಕೇಂದ್ರಗಳ ಆಡಳಿತ ವಹಿಸಿಕೊಳ್ಳಲು ಸಾಧ್ಯವಿಲ್ಲ. ಜಿಲ್ಲಾಧಿಕಾರಿ ಅವರಿಗೆ ನಮ್ಮ ವಿರೋಧವಿಲ್ಲ. ಆದರೆ ಅವರ ಹೆಸರನ್ನು ಹಿಂದೂ ಮುಜರಾಯಿ ದೇವಾಲಯದ ಆಮಂತ್ರಣ ಪತ್ರಿಕೆಯಲ್ಲಿ ಮುದ್ರಿಸಿದ್ದಕ್ಕೆ ಮಾತ್ರ ಆಕ್ಷೇಪವಿದೆ ಎಂದು ಸ್ಪಷ್ಟ ಪಡಿಸಿದ ಅವರು ಆಮಂತ್ರಣ ಪತ್ರಿಕೆ ಮರುಮುದ್ರಣ ಮಾಡದಿದ್ದಲ್ಲಿ ಪರಿಸ್ಥಿತಿ ಹದೆಗೆಡುವ ಸಾಧ್ಯತೆಗಳಿವೆ ಎಂದು ಎಚ್ಚರಿಸಿದರು. ಸುದ್ದಿಗೋಷ್ಠಿಯಲ್ಲಿ ಚಂದ್ರಶೇಖರ ರಾವ್ ಬಪ್ಪಳಿಗೆ, ಪಾಂಡುರಂಗ ಹೆಗ್ಡೆ, ಮೋಹನದಾಸ್, ಅನಂತರಾಮ್ ಉಪಸ್ಥಿತರಿದ್ದರು.







