ಪುತ್ತೂರು: ಮಾ.17: ಕುಂಬ್ರ ಜತ್ತಪ್ಪ ರೈ ಜೀವನ ಗಾಥೆ ಪುಸ್ತಕ ಬಿಡುಗಡೆ; ವಿಚಾರ ಸಂಕಿರಣ
ಪುತ್ತೂರು: ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಸರ್ವೋದಯ ಕಾರ್ಯಕರ್ತ ಕುಂಬ್ರ ಜತ್ತಪ್ಪ ರೈ ಅವರ ಜೀವನದ ಬಗ್ಗೆ ‘ಗಾಂಧಿ ಹೆಜ್ಜೆಯ ಜಾಡಿನಲ್ಲಿ- ಜತ್ತಪ್ಪ ರೈ ಜೀವನ ಗಾಥೆ’ ಎಂಬ ಪುಸ್ತಕ ಬಿಡುಗಡೆ ಮತ್ತು ವಿಚಾರ ಸಂಕಿರಣ ಕಾರ್ಯಕ್ರಮ ಮಾ.17ರಂದು ಮಂಗಳೂರಿನ ಯುನಿವರ್ಸಿಟಿ ಕಾಲೇಜ್ ಆವಣರಣದಲ್ಲಿ ನಡೆಯಲಿದೆ ಎಂದು ಕುಂಬ್ರ ಜತ್ತಪ್ಪ ರೈ ಪ್ರತಿಷ್ಠಾನದ ಅಧ್ಯಕ್ಷ ಇಳಂತಾಜೆ ಪ್ರಮೋದ್ ಕುಮಾರ್ ರೈ ತಿಳಿಸಿದ್ದಾರೆ.
ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕುಂಬ್ರ ಜತ್ತಪ್ಪ ರೈ ಪ್ರತಿಷ್ಠಾನ, ಮಂಗಳೂರು ವಿಶ್ವವಿದ್ಯಾನಿಲಯ, ವಿಶ್ವವಿದ್ಯಾನಿಲಯ ಕಾಲೇಜು, ಗಾಂಧೀ ಸ್ಮಾರಕ ನಿಧಿ ಬೆಂಗಳೂರು ಹಾಗೂ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ ಉಡುಪಿ ಇವುಗಳ ಸಹಯೋಗದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಪುಸ್ತಕ ಬಿಡುಗಡೆಯೊಂದಿಗೆ ‘ಗಾಂಧಿ ವಿಚಾರಧಾರೆ ಕಾಲಾತೀತ- ರಾಜಕೀಯ ಒಂದು ಪವಿತ್ರ ಸೇವೆ’ ಎಂಬ ವಿಚಾರ ಸಂಕಿರಣ ನಡೆಯಲಿದೆ. ಕಾರ್ಯಕ್ರಮವನ್ನು ಪಶ್ವಿಮ ಬಂಗಾಳದ ಮಾಜಿ ಗವರ್ನರ್ ಗೋಪಾಲಕೃಷ್ಣ ಗಾಂಧೀ ಉದ್ಘಾಟಿಸಲಿದ್ದಾರೆ. ರಾಜ್ಯದ ಮಾಜಿ ಲೋಕಾಯುಕ್ತ ಯನ್. ಸಂತೋಷ್ ಹೆಗ್ಡೆ ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಭಾರತ ಸಂಸ್ಕೃತಿ ಪ್ರತಿಷ್ಠಾನದ ಕುಲಪತಿ ಡಾ. ಏರ್ಯ ಲಕ್ಷ್ಮೀನಾರಾಯಣ ಆಳ್ವ ಪ್ರಸ್ತಾವನೆ ಮಾಡಲಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಕೆ. ಬೈರಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ಕೇಂದ್ರ ಆಡಳಿತ ನ್ಯಾಯಾಧೀಕರಣ ಸದಸ್ಯ ಸುಧೀರ್ ಕುಮಾರ್, ಸ್ವಾತಂತ್ರ್ಯ ಹೋರಾಟಗಾರ ಯಚ್. ಎಸ್. ದೊರೆಸ್ವಾಮಿ, ಉಡುಪಿ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ನಿರ್ದೇಶಕ ಪ್ರೊ. ಹೇರಂಜೆ ಕೃಷ್ಣ ಭಟ್ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಅಪರಾಹ್ನ ನಡೆಯಲಿರುವ ವಿಚಾರ ಸಂಕಿರಣದಲ್ಲಿ ಬೆಂಗಳೂರಿನ ಗಾಂಧೀ ಸ್ಮಾರಕ ನಿಧಿಯ ಅಧ್ಯಕ್ಷ ಡಾ. ಹೆಚ್. ಶ್ರೀನಿವಾಸಯ್ಯ ಮತ್ತು ಗೌರವ ಕಾರ್ಯದರ್ಶಿ ಪ್ರೊ. ಜಿ.ಬಿ.ಶಿವರಾಜು ಅವರು ಭಾಗವಹಿಸಲಿದ್ದರೆ. ರಾಜ್ಯದ ಮಾಜಿ ಎಡ್ವೊಕೇಟ್ ಜನ್‌ರಲ್ ಪ್ರೊ. ರವಿವರ್ಮ ಕುಮಾರ್ ಸಮಾರೋಪ ಭಾಷಣ ಮಾಡಲಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಕೆ. ಬೈರಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ನಿಟ್ಟೆ ವಿಶ್ವವಿದ್ಯಾನಿಲಯದ ಕುಲಪತಿ ಡಾ. ಯನ್. ವಿನಯ ಹೆಗ್ಡೆ, ಕೇಂದ್ರ ಕಾನೂನು ಸಚಿವ ಡಿ.ವಿ. ಸದಾನಂದ ಗೌಡ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಕುಂಬ್ರ ಜತ್ತಪ್ಪ ರೈ ಪ್ರತಿಷ್ಠಾನದ ಸದಸ್ಯ ಇಳಂತಾಜೆ ಪ್ರಸನ್ನ ಕುಮಾರ್ ರೈ ಉಪಸ್ಥಿತರಿದ್ದರು.





