16,000 ಕಾನ್‌ಸ್ಟೇಬಲ್‌ಗಳ ಹಾಗೂ 500 ಮಂದಿ ಪಿಎಸ್‌ಐಗಳ ನೇಮಕಾತಿಗೆ ಕ್ರಮ - ರಾಜ್ಯ ಗೃಹ ಸಚಿವ ಡಾ ಜಿ. ಪರಮೇಶ್ವರ

ಬೆಳ್ತಂಗಡಿ: ರಾಜ್ಯ ಪೋಲಿಸ್ ಇಲಾಖೆಯಲ್ಲಿ ಸಿಬ್ಬಂದಿಗಳ ಕೊರತೆ ತೀವ್ರವಾಗಿದ್ದು ಇದೀಗ 16,000 ಕಾನ್‌ಸ್ಟೇಬಲ್‌ಗಳ ಹಾಗೂ 500 ಮಂದಿ ಪಿಎಸ್‌ಐಗಳ ನೇಮಕಾತಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ರಾಜ್ಯ ಗೃಹ ಸಚಿವ ಡಾ ಜಿ. ಪರಮೇಶ್ವರ ತಿಳಿಸಿದರು.
ಅವರು ಸೋಮವಾರ ಧರ್ಮಸ್ಥಳದಲ್ಲಿ ಪೋಲಿಸ್ ಠಾಣೆಯ ಉದ್ಘಾಟನಾ ಕಾರ್ಯಕ್ರಮ ಸಂದರ್ಭ ಮಾಧ್ಯಮದವರೊಂದಿಗೆ ಮಾತನಾಡಿದರು.
ಈಗಾಗಲೇ 8000 ಮಂದಿ ಕಾನ್‌ಸ್ಟೇಬಲ್‌ಗಳ ನೇಮಕಾತಿ ಪ್ರಕ್ರಿಯೆ ಮುಕ್ತಾಯದ ಹಂತದಲ್ಲಿದೆ. ಇನ್ನೂ ಎಂಟು ಸಾವಿರ ಮಂದಿಯ ಆಯ್ಕೆ ಪ್ರಕ್ರಿಯೆ ಕೆಲವೇ ದಿನಗಳಲ್ಲಿ ಆರಂಭಗೊಳ್ಳಲಿದೆ. ಸಿಬ್ಬಂದಿ ನೇಮಕಾತಿ ಮುಗಿದಾಗ ರಾಜ್ಯದ ಪೋಲಿಸ್ ಇಲಾಖೆಯ ಬಹುತೇಕ ಸಿಬ್ಬಂದಿ ಸಮಸ್ಯೆಯು ನಿವಾರಣೆಯಾಗುತ್ತದೆ. ಇಲಾಖೆಯನ್ನು ಜನಸ್ನೇಹಿಯನ್ನಾಗಿಸುವ ಉದೇಶದಿಂದ ರಾಜ್ಯ ಗೃಹ ಇಲಾಖೆ ಹಲವಾರು ಕ್ರಮಗಳನ್ನು ಕೈಗೊಂಡಿದ್ದು, ಠಾಣೆಗೆ ಬರುವ ಪ್ರತಿಯೊಬ್ಬ ನಾಗರಿಕನಿಗೂ ನ್ಯಾಯ ಸಿಗುವಂತೆ ನೋಡಿಕೊಳ್ಳಲಾಗುವುದು ಎಂದರು. ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಕ್ಷೇತ್ರಕ್ಕೆ ಬರುವ ಭಕ್ತರಿಗೆ ಮತ್ತು ಸ್ಥಳೀಯ ಜನರಿಗೆ ಸೂಕ್ತ ರಕ್ಷಣೆ ಮತ್ತು ಸಂಚಾರಿ ವ್ಯವಸ್ಥೆ ಸುಗಮವಾಗಿಸಲು ಅಗತ್ಯವಾಗಿದ್ದು ಇದನ್ನು ಮನಗೊಂಡು ಹೊಸ ಠಾಣೆಯನ್ನು ಮಂಜೂರುಗೊಳಿಸಲಾಗಿದೆ. ಠಾಣೆಗೆ ಸ್ವತಂತ್ರವಾದ ಹೊಸ ಕಟ್ಟಡ ಹಾಗು ಅಗತ್ಯ ಸಿಬ್ಬಂದಿಗಳ ನೇಮಕಾತಿಗೆ ಕ್ರಮ ಕೈಗೊಳ್ಳಲಾಗುವುದು. ಪೋಲಿಸ್ ದೂರು ಪ್ರಾಧಿಕಾರದ ಕಾರ್ಯನಿರ್ವಹಣೆಯನ್ನು ಉತ್ತಮ ಪಡಿಸುವ ನಿಟ್ಟಿನಲ್ಲಿ ಈಗಾಗಲೇ ರಾಜ್ಯ ಮಟ್ಟದಲ್ಲಿ ಪರಿಶೀಲನೆ ನಡೆಸಲಾಗಿದ್ದು ಮುಂದಿನ ದಿನಗಳಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಪೋಲಿಸ್ ಅಧಿಕಾರಿಗಳ ವರ್ಗಾವಣೆಯಲ್ಲಿ ಯಾರದೇ ಹಸ್ತಕ್ಷೇಪಕ್ಕೆ ಅವಕಾಶವಿರುವುದಿಲ್ಲ. ಶಿಸ್ತಿನ ಇಲಾಖೆಯಾಗಿರುವ ಪೋಲಿಸ್ ಇಲಾಖೆಯಲ್ಲಿ ಯಾವುದೆ ಅಶಿಸ್ತನ್ನು ಸಹಿಸುವುದಿಲ್ಲ ಮತ್ತು ಒತ್ತಡಗಳಿಗೂ ಮಣಿಯುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಅತಂತ್ರ ಸ್ಥಿತಿಯಿರುವ ರಾಜ್ಯದ 5 ಜಿಲ್ಲಾ ಪಂಚಾಯತುಗಳಲ್ಲಿ ಕಾಂಗ್ರೇಸ್‌ಗೆ ಅಧಿಕಾರಕ್ಕೆ ಬರುವ ಅವಕಾಶವಿದ್ದು ಬಿಜೆಪಿ ಹೊರತುಪಡಿಸಿ ಇತರ ಪಕ್ಷಗಳೊಂದಿಗೆ ಹೊಂದಾಣಿಕ ಮಾಡಿಕೊಳ್ಳಲು ಸೂಚನೆ ನೀಡಲಾಗಿದೆ. ಕೆಪಿಸಿಸಿ ಅಧ್ಯಕ್ಷರ ಹುದ್ದೆಯ ಕುರಿತು ಈವರೆಗೆ ಯಾವುದೇ ಹೊಸ ಚರ್ಚೆ ಆಗಿಲ್ಲ. ಎಲ್ಲರೂ ಸೇರಿ ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಮಂಗಳೂರು ಜೈಲ್‌ನಲ್ಲಿ ಮೊಬೈಲ್ ಜಾಮರ್ ಅಳವಡಿಕೆಯಿಂದ ಸ್ಥಳೀಯ ಜನರಿಗೆ ತೊಂದರೆಯಾಗಿರುವುದು ಗೊತ್ತಾಗಿದೆ. ಜೈಲಿನಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ. ನಗರದ ಹೊರವಲಯದಲ್ಲಿ 40 ಎಕರೆ ಜಾಗ ಮಂಜೂರಾಗಿದೆ. ಜೈಲಿನ್ನು ಹೊಸ ಜಾಗಕ್ಕೆ ಸ್ಥಳಾಂತರಿಸುವಾಗ ಈ ಸಮಸ್ಯೆ ಪರಿಹಾರವಾಗಲಿದೆ ಎಂದರು.
ಮೈಸೂರಿನಲ್ಲಿ ನಡೆದ ಕೊಲೆಪ್ರಕರಣದ ತನಿಖೆಯನ್ನು ಈಗಾಗಲೇ ಸಿಸಿಬಿಗೆ ವಹಿಸಲಾಗಿದೆ. ತಪ್ಪು ಮಾಡಿದವರು ಯಾರೇ ಆಗಲಿ ಅವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು. ಈ ಪ್ರಕರಣವನ್ನು ರಾಜಕೀಯಕರಣಗೊಳಿಸದೆ ಶಾಂತಿ, ಸುವ್ಯವಸ್ಥೆ ಕಾಪಾಡುವಂತೆ ಅವರು ಈ ಸಂದರ್ಭ ಮನವಿ ಮಾಡಿದರು.







