ಬೆಳ್ತಂಗಡಿ: ಧರ್ಮಸ್ಥಳ ನೂತನ ಪೊಲೀಸ್ ಠಾಣೆಯ ಉದ್ಘಾಟನೆ
ಸಮಾಜಮುಖಿಯಾಗಿ, ಜನಪರವಾಗಿ ಯೋಚಿಸುವ ಕಾಲ ಇದಾಗಿದೆ- ಡಾಜಿ. ಪರಮೇಶ್ವರ್

ಬೆಳ್ತಂಗಡಿ: ರಾಜ್ಯದಲ್ಲಿ ಪೋಲಿಸ್ ಸಿಬ್ಬಂದಿಗಳಿಗೆ 11,000 ಮನೆಗಳನ್ನು ನಿರ್ಮಿಸುವ ಗುರಿಯಿಟ್ಟುಕೊಂಡಿದ್ದು ಈಗಾಗಲೇ 3000 ಪೋಲಿಸ್ ಗೃಹಗಳ ನಿರ್ಮಾಣ ಕಾರ್ಯ ಮುಗಿದೆ. ಈ ವರ್ಷ 4500 ಮನೆಗಳ ನಿರ್ಮಾಣ ಮಾಡುವ ಉದ್ದೇಶವಿದೆ. ಧರ್ಮಸ್ಥಳಲ್ಲಿ ಠಾಣೆ ಹಾಗು ವಸತಿ ಗೃಹಕ್ಕೆ 2 ಎಕರೆ ಜಾಗ ಅಗತ್ಯವಿದೆ. ಜಾಗ ಮಂಜೂರುಗೊಂಡ ಕೂಡಲೆ ಕಟ್ಟಡ ರಚನೆಗೆ ಕೂಡಲೇ ಸರಕಾರ ಗಮನಹರಿಸಲಿದೆ ಎಂದು ರಾಜ್ಯ ಗೃಹ ಸಚಿವ ಡಾ ಜಿ.ಪರಮೇಶ್ವರ ಹೇಳಿದರು.
ಅವರು ಸೋಮವಾರ ಧರ್ಮಸ್ಥಳ ಗ್ರಾ.ಪಂ. ಕಟ್ಟಡದಲ್ಲಿ ಪೂರ್ಣ ಪ್ರಮಾಣದ ಪೋಲಿಸ್ ಠಾಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಕಾನೂನು, ನಿಯಮಗಳ ಚೌಕಟ್ಟಿನಲ್ಲಿ ನಾಗರಿಕರು ಜೀವನವನ್ನು ಸಾಗಿಸಬೇಕು ಎಂಬುದನ್ನು ನೆನಪಿಸಲು ಸಮಾಜದಲ್ಲಿ ಪೋಲಿಸ್ ವ್ಯವಸ್ಥೆ ಇದೆ. ಸಹಾಯ ಬಯಸಿ ಬಂದವರಿಗೆ ಸ್ಪಂದಿಸಲು ಠಾಣೆಯಿರುವುದೇ ವಿನಾ ಶಿಕ್ಷೆ ನೀಡಲು, ಜೈಲಿಗೆ ಹಾಕಲು ಇರುವುದಲ್ಲ. ಪೋಲಿಸ್ ಅಧಿಕಾರಿಗಳು, ಸಿಬ್ಬಂದಿಗಳು ನಮ್ಮ ಸಮಾಜದಿಂದಲೇ ಬಂದಿದ್ದಾರೆ. ಅವರಿಗೂ ಸಮಸ್ಯೆಗಳಿವೆ. ರಾಜ್ಯ ಪೋಲಿಸ್ ಇಲಾಖೆ ತನ್ನ ಕಾರ್ಯನಿರ್ವಹಣೆ ಬಗ್ಗೆ ದೇಶದಲ್ಲೇ ಪ್ರಖ್ಯಾತಿಯನ್ನು ಪಡೆದ ಇಲಾಖೆಯಾಗಿದೆ ಎಂದರು. ರಾಜ್ಯ ಪೋಲೀಸ್ ಇಲಾಖೆಯಲ್ಲಿ 1 ಲಕ್ಷ ಸಿಬ್ಬಂದಿಗಳು ಬೇಕಾದಲ್ಲಿ ಈಗ 75 ಸಾವಿರ ಸಿಬ್ಬಂದಿಗಳು ಮಾತ್ರ ಇದ್ದಾರೆ. 16 ಸಾವಿರ ಸಿಬ್ಬಂದಿಗಳ ನೇಮಕಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಜಿಲ್ಲೆಯಲ್ಲಿ ಈಗಾಗಲೇ 160 ಮಂದಿಯ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿಯೂ ಮಹಿಳಾ ಠಾಣೆಗಳನ್ನು ಆರಂಭಿಸುವ ಪ್ರಕ್ರಿಯೆ ನಡೆಯುತ್ತಿದೆ. ಬೆಳ್ತಂಗಡಿ ತಾಲೂಕಿನ ಬೇಡಿಕೆಗಲಳನ್ನು ಈಡೇರಿಸುವುದಾಗಿ ಭರವಸೆ ನೀಡಿದರು. ರಾಜ್ಯದಲ್ಲಿ 2015ರಲ್ಲಿ ಅಪರಾಧ ಸಂಖ್ಯೆ ಕಡಿಮೆ ಆಗಿದೆ ಎಂದರು. ಧರ್ಮಾಧಿಕಾರಿ ಡಾ ವೀರೇಂದ್ರ ಹೆಗ್ಗಡೆ ಅವರು ಮಾತನಾಡಿ ಕ್ಷೇತ್ರದಲ್ಲಿ ಠಾಣೆ ರಚನೆಯಾಗಿರುವುದುನ್ನು ಉತ್ತಮ ಬೆಳವಣಿಗೆ ಕ್ಷೇತ್ರದಲ್ಲಿ ಜನರ, ವಾಹನಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದನ್ನು ನಿಯಂತ್ರಿಸಲು ಠಾಣೆ ಪ್ರಮುಖ ಪಾತ್ರ ವಹಿಸುತ್ತದೆ ಎಂಬ ವಿಶ್ವಾಸವಿದೆ. ಠಾಣೆಯ ಅಧಿಕಾರಿಗಳು, ಸಿಬ್ಬಂದಿಗಳು ಜನಸ್ನೇಹಿಯಾಗಿಯೂ ನ್ಯಾಯಯುತವಾಗಿಯೂ ಕಾರ್ಯನಿರ್ವಹಿಸಲಿ ಎಂದು ಆಶಿಸಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ. ವಸಂತ ಬಂಗೇರ ಅವರು ಹೊಸ ಠಾಣೆಯಲ್ಲಿ ಸಿಬ್ಬಂದಿಗಳ ಕೊರತೆಯನ್ನು ಆದಷ್ಟು ಶೀಘ್ರವಾಗಿ ಭರ್ತಿಮಾಡಬೇಕು. ಅರಸಿನಮಕ್ಕಿಯಲ್ಲಿ ಹೊರಠಾಣೆ ಮತ್ತು ಬೆಳ್ತಂಗಡಿಯಲ್ಲಿ ಟ್ರಾಪಿಕ್ ಠಾಣೆಯನ್ನು ಪ್ರಾರಂಭಿಸಬೇಕು ಎಂದು ಅವರು ಗೃಹಸಚಿವರಲ್ಲಿ ಮನವಿ ಮಾಡಿದರು. ವೇದಿಕೆಯಲ್ಲಿ ಕ್ರೀಡಾ ಸಚಿವ ಅಭಯಚಂದ್ರ ಜೈನ್, ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ಪಶ್ಚಿಮ ವಲಯ ಪೋಲಿಸ್ ಮಹಾನಿರೀಕ್ಷಿಕ ಅಮೃತ್ ಪಾಲ್, ಪೋಲಿಸ್ ಆಯುಕ್ತ ಎಂ. ಚಂದ್ರಶೇಖರ, ಉಪಾಧೀಕ್ಷಕ ಎನ್. ಜಿ. ಭಾಸ್ಕರ ರೈ, ಬೆಳ್ತಂಗಡಿ ವೃತ್ತ ನಿರೀಕ್ಷಕ ಲಿಂಗಪ್ಪ ಪೂಜಾರಿ, ಧರ್ಮಸ್ಥಳ ಠಾಣಾಧಿಕಾರಿಗಳಾದ ಮಾಧವ ಕೂಡ್ಲು, ಹಾಗೂ ಕ್ರೈಂ ಎಸ್. ಐ. ಸುಧಾರಕ ತೋನ್ಸೆ ಜಿ.ಪಂ. ಸದಸ್ಯರಾದ ಕೊರಗಪ್ಪ ನಾಯ್ಕ, ನಮಿತಾ, ಧರ್ಮಸ್ಥಳ ಗ್ರಾಮಪಂಚಾಯತ್ ಅಧ್ಯಕ್ಷ ಡಿ. ಅಚ್ಯುತ ಪೂಜಾರಿ, ತಾ.ಪಂ. ಸದಸ್ಯರಾದ ಧರ್ಣಮ್ಮ, ದಿವ್ಯಜ್ಯೋತಿ, ವಿ.ಟಿ.ಸೆಬಾಸ್ಟಿಯನ್, ಧನಲಕ್ಷ್ಮೀ, ಲಕ್ಷ್ಮೀನಾರಾಯಣ, ಕೊರಗಪ್ಪ ಗೌಡ ಮತ್ತಿತರರು ಉಪಸ್ಥಿತರಿದ್ದರು.
ಪೋಲಿಸ್ ಅಧೀಕ್ಷಕ ಡಾ ಶರಣಪ್ಪ ಸ್ವಾಗತಿಸಿ ಪ್ರಸ್ತಾವಿಸಿದರು. ಹೆಚ್ಚುವರಿ ಪೋಲಿಸ್ ಅಧೀಕ್ಷಕ ವಿನ್ಸೆಂಟ್ ಶಾಂತಕುಮಾರ್ ವಂದಿಸಿದರು. ಪುಂಜಾಲಕಟ್ಟೆ ಸ.ಪ್ರೌ.ಶಾಲೆ ಸಹಶಿಕ್ಷಕ ಧರಣೇಂದ್ರ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.
ಅಂಬೇಡ್ಕರ್ ಅವರು ಸ್ವಾಂತಂತ್ರ್ಯ, ಸಮಾನತೆ, ಭಾತೃತ್ವದ ಸಂದೇಶ ಸಂವಿಧಾನದಲ್ಲಿ ತಂದು ಸಹಬಾಳ್ವೆಯ ಚಿಂತನೆ ನೀಡಿದ್ದಾರೆ. ಆದರೆ ಸ್ವಾತಂತ್ರ್ಯಾನಂತರ ದ 6 ದಶಕಗಳ ಬಳಿಕವೂ ಇದನ್ನು ಇನ್ನೂ ಪೂರ್ಣವಾಗಿ ಸಾಧಿಸಲು ಸಾಧ್ಯವಾಗಿಲ್ಲ. ದೇಶದಲ್ಲಿ ಯುವಕರ ಸಂಖ್ಯೆಯೇ ಹೆಚ್ಚಾಗಿದ್ದು ಅವರ ಚಿಂತನಾ ಶೈಲಿ ಬದಲಾಗುತ್ತಿದೆ. ಇದನ್ನು ಇತ್ತೀಚಿನ ಘಟನೆಗಳಲ್ಲಿ ಗಮನಿಸಬಹುದಾಗಿದೆ. ಹೀಗಾಗಿ ಜನಪ್ರತಿನಿಧಿಗಳು, ಅಧಿಕಾರಿಗಳು ಸಮಾಜಮುಖಿಯಾಗಿ, ಜನಪರವಾಗಿ ಯೋಚಿಸುವ ಕಾಲ ಇದಾಗಿದೆ- ಡಾಜಿ. ಪರಮೇಶ್ವರ್
1983 ರಲ್ಲಿ ಧರ್ಮಸ್ಥಳದಲ್ಲಿ ಹೊರಠಾಣೆ ಆರಂಭವಾಗಿತ್ತು. 33 ವರ್ಷಗಳ ನಂತರ ಇದೀಗ ಪೂರ್ಣಪ್ರಮಾಣದ ಠಾಣೆ ಆರಂಭವಾಗಿದೆ. ಠಾಣೆಯಲ್ಲಿ 2 ಎಸ್‌ಐ, 2 ಎಎಸ್‌ಐ, 10 ಮಂದಿ ಹೆಡ್‌ಕಾನ್‌ಸ್ಟೇಬಲ್ ಹಾಗೂ 30 ಮಂದಿ ಕಾನ್‌ಸ್ಟೇಬಲ್‌ಗಳು ಕಾರ್ಯನಿರ್ವಹಿಸಲಿದ್ದಾರೆ. ಸದ್ಯ 20 ಹುದ್ದೆಗಳು ಮಾತ್ರ ಇಲ್ಲಿ ಭರ್ತಿಯಾಗಿವೆ







