ಲಾಯಿಲ: ಕುಡಿಯುವ ನೀರಿಗಾಗಿ ಹೋರಾಟ, ಡಿ.ಎಸ್.ಎಸ್. ಸಮಿತಿಯಿಂದ ಎಚ್ಚರಿಕೆ

ಬೆಳ್ತಂಗಡಿ: ಲಾಯಿಲ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದು ಜನ ಕುಡಿಯುವ ನೀರಿಗಾಗಿ ನದಿಯ ಗಲೀಜು ನೀರನ್ನು ಅವಲಂಬಿಸಬೇಕಾಗಿರುವುದು ನಮ್ಮ ದುರಂತ. ಪರಿಸ್ಥಿತಿ ಹೀಗೆ ಮುಂದುವರಿದರೆ ಪಂಚಾಯತ್ ಎದುರು ಉಪವಾಸ ಸತ್ಯಾಗ್ರಹ ನಡೆಸಬೇಕಾದೀತೆಂದು ಡಿ.ಎಸ್.ಎಸ್. (ಅಂಬೇಡ್ಕರ್ ವಾದ)
ತಾಲೂಕು ಮುಖಂಡ ನಾಗರಾಜ್‌ಎಸ್. ಲಾಯಿಲ ಎಚ್ಚರಿಸಿದರು. ಅವರು ಲಾಯಿಲ ಗ್ರಾಮ ಪಂಚಾಯತ್
ಎದುರು ವಿವಿಧ ಬೇಡಿಕೆಗಳನ್ನು ಮುಂದಿಟ್ಟು ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಪಂಚಾಯತ್ ವ್ಯಾಪ್ತಿಯಲ್ಲಿ ಹಲವು ಸಮಸ್ಯೆಗಳಿದ್ದರೂ ಕೂಡಾ ಆಡಳಿತ ವರ್ಗ ಕಣ್ಣು ಮುಚ್ಚಿ ಕುರುಡರಂತೆ ವರ್ತಿಸುತ್ತಿದೆ. ರಸ್ತೆ, ಕುಡಿಯುವ ನೀರು, ಚರಂಡಿ, ಶೌಚಾಲಯ ಮೊದಲಾದ ಮೂಲಭೂತ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ವಿಫಲವಾಗಿರುವ ಪಂಚಾಯತ್ ಆಡಳಿತಕ್ಕೆ ಪ್ರಶಸ್ತಿಗಳು ಲಭಿಸಿರುವುದು ಸಂಶಯಾಸ್ಪದವಾಗಿದೆ ಎಂದು ಆರೋಪಿಸಿದರು. ಅಂಗನವಾಡಿಕೇಂದ್ರ, ಅಂಬೇಡ್ಕರ ಭವನ ಕುಸಿಯುವ ಹಂತದಲ್ಲಿದ್ದು ಮುಂದಿನ ಏಪ್ರಿಲ್ 14ರೊಳಗೆ ಈ ಬಗ್ಗೆ ಕ್ರಮಕೈಕೊಳ್ಳದಿದ್ದಲ್ಲಿ ಪಂಚಾಯತ್‌ಎದುರು ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದರು. ಸಭೆಯನ್ನು ಉದ್ದೇಶಿಸಿ ಸಾಮಾಜಿಕ ಹೋರಾಟಗಾರ ಬಿ. ದಾಮೋಧರ್ ಭಟ್, ಬೈರ ಸಮಾಜ ಸೇವಾ ಸಂಘದ ಅಧ್ಯಕ್ಷ ಉದಯಕುಮಾರ್, ಕಾರ್ಯದರ್ಶಿ ಸುರೇಶ್ ವಿ.ಎಸ್. ಗ್ರಾಮಸ್ಥರಾದ ಸೈಯದ್ ಅಲಿ ಮಾತನಾಡಿದರು. ಈ ಸಂದರ್ಭದಲ್ಲಿ ಹೈದರ್ ಪುತ್ರಬೈಲ್, ಡಿ.ಎಸ್.ಎಸ್. ಅಂಬೇಡ್ಕರ್ ವಾದ ಗ್ರಾಮ ಸಂಚಾಲಕ ಶ್ರೀನಿವಾಸ್ ಕೆ.ಎಸ್., ಸತೀಶ ಎಲ್. ನಿನ್ನಿಕಲ್ಲು, ಅಶ್ರಫ್‌ಅಂಬೇಡ್ಕರ್ ನಗರ, ಸಂಕಪ್ಪ ಪುತ್ರಬೈಲು, ಮೋನಪ್ಪ ಬೆರ್ಕೆ, ವಸಂತಕಾವಟೆ, ಪುಟ್ಟಪ್ಪ ಪುತ್ರಬೈಲ್, ಉದಯ ಗೋಳಿಯಂಗಡಿ, ದಯಾನಂದ ಪುತ್ರಬೈಲು, ರಫೀಕ್‌ಅಂಬೇಡ್ಕರ್ ನಗರ ಉಪಸ್ಥಿತರಿದ್ದರು. ಪ್ರತಿಭಟನಾಕಾರರು ಮನವಿಯನ್ನು ಪಂಚಾಯತ್ ಅಧ್ಯಕ್ಷರು ಹಾಗೂ ಸದಸ್ಯರು ಸ್ವೀಕರಿಸಿದರು ಈ ಸಂದರ್ಭ ಮಾತನಾಡಿದ ಅಧ್ಯಕ್ಷೆ ವೀಣಾರಾವ್ ತಮ್ಮ ಬೇಡಿಕೆಗಳನ್ನು ಅನುದಾನದ ಆಧಾರದಲ್ಲಿ ಹಂತಹಂತವಾಗಿ ಈಡೇರಿಸಲಾಗುವುದು ಎಂದರು. ಈ ಸಂದರ್ಭ ತಾಲೂಕು ಪಂಚಾಯತ್ ಮೇನೇಜರ್ ಗಣೇಶ್ ಪೂಜಾರಿ, ಲಾಯಿಲ ಪಂಚಾಯತ್ ಪಿ.ಡಿ.ಓ. ಪ್ರಕಾಶ್ ಶೆಟ್ಟಿ ನೊಚ್ಚ, ಉಪಾಧ್ಯಕ ್ಷಗಿರೀಶ್‌ಡೋಂಗ್ರೆ, ತಾ.ಪಂ. ಸದಸ್ಯ ಸುಧಾಕರ ಬಿ.ಎಲ್. ಸೇರಿದಂತೆ ಪಂಚಾಯತ್ ಸದಸ್ಯರುಗಳು ಉಪಸ್ಥಿತರಿದ್ದರು.
ಪ್ರತಿಭಟನೆ ರಾಜಕೀಯ ಪ್ರೇರಿತ ಗ್ರಾ,ಪಂ. ಆಡಳಿತ
ಲಾಯಿಲ ಗ್ರಾ.ಪಂ. ಎದುರು ಇಂದು ನಡೆದ ಪ್ರತಿಭಟನೆ ದುರುದ್ದೇಶ ಪೂರ್ವಕ ನಡೆದಿದ್ದು, ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕಾರ್ಯ ಮಾಡಲಾಗಿದೆ. ಯಾವುದೇ ಸಮಸ್ಯೆಗಳಿದ್ದರೆ ಅದನ್ನು ಪರಿಹರಿಸಲು ಗ್ರಾ.ಪಂ. ಸಿದ್ದವಾಗಿದೆ ಎಂದು ಗ್ರಾ.ಪಂ ಅಧ್ಯಕ್ಷ ವೀಣಾರಾವ್, ಉಪಾಧ್ಯಕ್ಷ ಗಿರೀಶ್ ಡೋಂಗ್ರೆ ಸೋಮವಾರ ಪತ್ರಿಕಾಗೋಷ್ಠಿ ನಡೆಸಿ ತಿಳಿಸಿದರು.
ಲಾಯಿಲ ಪಂಚಾಯತು ರಾಜ್ಯದಲ್ಲಿಯೇ ಗುರುತಿಸುವಂತಹ ಸಾಧನೆ ಮಾಡಿದ್ದು ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಬಂದ ಅನುದಾನಗಳ ಸಮರ್ಪಕ ಬಳಕೆ ಮಾಡಲಾಗಿದೆ. ಪ್ರತಿಭಟನಾಕಾರರು ಮಾಡಿರುವ ಹೆಚ್ಚಿನ ಆರೋಪಗಳು ವಾಸ್ತವಕ್ಕೆ ದೂರವಾಗಿವೆ. ಕುಡಿಯುವ ನೀರಿನ ಸಮಸ್ಯೆ ಒಂದಿಷ್ಟು ಇದ್ದರೂ ಅದನ್ನು ಪರಿಹರಿಸಲಾಗಿದೆ. ಇನ್ನುಳಿದ ಪ್ರದೇಶಗಳಿಗೂ ನೀರೊದಗಿಸುವ ವ್ಯವಸ್ಥೆ ಮಾಡಲಾಗುವುದು. ಬಂದ ಅನುದಾನಗಳನ್ನು ಉಪಯೋಗಿಸಿ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ. ಶಾಸಕರ, ಜಿ.ಪಂ. ಸದಸ್ಯರ ಮೇಲೆ ಒತ್ತಡ ಹಾಕಿ ಇನ್ನಷ್ಟು ಅನುದಾನ ತರುವ ಪ್ರಯತ್ನ ನಡೆಸುತ್ತೇವೆ ಎಂದು ಸ್ಪಷ್ಟಪಡಿಸಿದರು. ಗೋಷ್ಠಿಯಲ್ಲಿ ತಾ.ಪಂ. ಸದಸ್ಯ ಸುಧಾಕರ ಬಿ.ಎಲ್., ಗ್ರಾ.ಪಂ. ಸದಸ್ಯರಾದ ದಿನೇಶ್ ಶೆಟ್ಟಿ, ಮೋಹನದಾಸ, ರುಕ್ಮಯ್ಯ ಕನ್ನಾಜೆ, ಮಾಜಿ ಸದಸ್ಯ ವಸಂತ ರಾಣೆ ಇದ್ದರು.







