ಪುತ್ತೂರು: ರೈತರ ಸಮಸ್ಯೆಗಳನ್ನು ಬಗೆಹರಿಸಲು ಸಂಘಟಿತ ಪ್ರಯತ್ನ ನಡೆಸುತ್ತೇನೆ - ಉಮಾನಾಥ ಶೆಟ್ಟಿ
ಪುತ್ತೂರು: ಜಿಲ್ಲೆಯಲ್ಲಿ ರೈತರ ಹಲವಾರು ಸಮಸ್ಯೆಗಳಿದ್ದು, ರೈತರ ಸಮಸ್ಯೆಗಳನ್ನು ಬಗೆಹರಿಸಲು ಸಂಘಟಿತ ಪ್ರಯತ್ನ ನಡೆಸಲಾಗುವುದು. ರೈತರಿಗೆ ಸಮಸ್ಯೆ ಎದುರಾದಾಗ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಲಾಗುವುದು. ಈ ನಿಟ್ಟಿನಲ್ಲಿ ಜಿಲ್ಲೆಯ 16 ಬ್ಲಾಕ್‌ಗಳಲ್ಲಿ ಕ್ರೀಯಾಶೀಲ ರೈತರನ್ನು ಪದಾಧಿಕಾರಿಗಳನ್ನಾಗಿ ನೇಮಿಸುವ ಕೆಲಸ ನಡೆಯಲಿದೆ ಎಂದು ಜಿಲ್ಲಾ ಕಾಂಗ್ರೆಸ್‌ನ ಕಿಸಾನ್ ಘಟಕದ ನೂತನ ಅಧ್ಯಕ್ಷ ಉಮಾನಾಥ ಶೆಟ್ಟಿ ತಿಳಿಸಿದ್ದಾರೆ.
ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ತನ್ನನ್ನು ಜಿಲ್ಲಾ ಘಟಕದ ಅಧ್ಯಕ್ಷರಾಗಿ ಕಿಸಾನ್ ಖೇತ್ ಮಜ್ದೂರ್ ಕಾಂಗ್ರೆಸ್‌ನ ಅಧ್ಯಕ್ಷ ಸಚಿನ್ ಮೀಗಾ ನೇಮಿಸಿ ಆದೇಶ ಹೊರಡಿಸಿದ್ದಾರೆ. ತಾನು ರೈತನಾಗಿದ್ದು, ರೈತರ ಎಲ್ಲಾ ನೋವುಗಳನ್ನು ಹತ್ತಿರದಿಂದ ಬಲ್ಲವನಾಗಿದ್ದೇನೆ. ಮುಂದಿನ ದಿನಗಳಲ್ಲಿ ಜಿಲ್ಲಾ ಮುಖಂಡರ ಸಹಕಾರದೊಂದಿಗೆ ಬ್ಲಾಕ್ ಮಟ್ಟದಲ್ಲಿ ಪಕ್ಷ ಸಂಘಟನೆ ಮಾಡುತ್ತೇನೆ ಎಂದರು.
ಜಿಲ್ಲಾ ಘಟಕದ ಮೂಲಕ ರೈತರ ಸಂಘಟನೆ ಕಡೆ ಗಮನ ಹರಿಸಲಾಗುವುದು. ಪ್ರತಿ ಬ್ಲಾಕ್ ಮಟ್ಟದಿಂದಲೇ ಸಂಘಟನೆ ಕಾರ್ಯ ನಡೆಯಲಿದೆ. ಕ್ರಿಯಾಶೀಲ ರೈತರನ್ನು ಗುರುತಿಸಿ, ಸಂಘಟನೆ ಕಡೆ ಗಮನ ಹರಿಸಲಾಗುವುದು. ರೈತರ ಸಮಸ್ಯೆ ಗುರುತಿಸಿ ಪರಿಹಾರಕ್ಕೆ ಶ್ರಮಿಸಲಾಗುವುದು. ರಾಜ್ಯ ಬಜೆಟ್ ಬಗ್ಗೆಯೂ ಚರ್ಚೆ ನಡೆದಿದೆ. ಅಡಕೆಗೆ ಮಂಡಳಿ ರಚನೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತರಲಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪುತ್ತೂರು ಶಾಸಕಿ ಶಕುಂತಳಾ ಶೆಟ್ಟಿ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಫಝಲ್ ರಹೀಂ, ವಿಟ್ಲ- ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್‌ಚಂದ್ರ ಆಳ್ವ, ಪುತ್ತೂರು ಕಿಸಾನ್ ಘಟಕದ ಅಧ್ಯಕ್ಷ ಎ.ಕೆ.ಜಯರಾಮ ರೈ ಉಪಸ್ಥಿತರಿದ್ದರು.





