ಉಪ್ಪಿನಂಗಡಿ: ಇಬ್ಬರು ವಿದ್ಯಾರ್ಥಿಗಳು ಸೇರಿದಂತೆ ನಾಲ್ವರಿಗೆ ಹುಚ್ಚುನಾಯಿ ಕಡಿತ
ಉಪ್ಪಿನಂಗಡಿ: ಇಬ್ಬರು ವಿದ್ಯಾರ್ಥಿಗಳು ಸೇರಿದಂತೆ ನಾಲ್ವರಿಗೆ ಹುಚ್ಚುನಾಯಿ ಕಡಿದ ಘಟನೆ ಉಪ್ಪಿನಂಗಡಿಯಲ್ಲಿ ಸೋಮವಾರ ನಡೆದಿದೆ.
ಇಲ್ಲಿನ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ 9ನೇ ತರಗತಿಯ ವಿದ್ಯಾರ್ಥಿಗಳಾದ ಗಿರೀಶ್ ಹಾಗೂ ಚಂದ್ರಿಕಾ ಮತ್ತು ಸರಳೀಕಟ್ಟೆ ನಿವಾಸಿ ಸಲೀಂ ಹಾಗೂ ಇಳಂತಿಲ ನಿವಾಸಿ 60ರ ಹರೆಯದ ಅಮೀನಾ ಎಂಬವರು ಹುಚ್ಚುನಾಯಿ ಕಡಿತಕ್ಕೊಳಗಾದವರು. ಇವರಲ್ಲಿ ಗಿರೀಶ್ ಬಾರ್ಯದವನಾದರೆ, ಚಂದ್ರಿಕಾ ಇಳಂತಿಲದವಳು. ಇಂದು ಮಧ್ಯಾಹ್ನ ಪರೀಕ್ಷೆಗೆಂದು ಶಾಲೆಗೆ ಬರುತ್ತಿದ್ದ ಇವರಲ್ಲಿ ಓರ್ವನಿಗೆ ಕೆಂಪಿಮಜಲು ಬಳಿ ಹುಚ್ಚು ನಾಯಿ ಕಡಿದರೆ, ಇನ್ನೊಬ್ಬಳಿಗೆ ಹಿರೆಬಂಡಾಡಿ ಕ್ರಾಸ್‌ನಲ್ಲಿ ಹುಚ್ಚುನಾಯಿ ಕಡಿದಿದೆ. ಸಲೀಂ ಹಾಗೂ ಅಮೀನಾರಿಗೆ ನೇತ್ರಾವತಿ ನದಿಯ ಸೇತುವೆಯ ಬಳಿ ಹುಚ್ಚುನಾಯಿ ಕಡಿದಿದೆ. ಹುಚ್ಚು ನಾಯಿ ಕಡಿತಕ್ಕೊಳಗಾದವರೆಲ್ಲರೂ ಉಪ್ಪಿನಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಇವರೆಲ್ಲರಿಗೂ ಕಪ್ಪು ಬಣ್ಣದ ನಾಯಿಯೊಂದು ಕಚ್ಚಿದ್ದು, ಇದು ಬಳಿಕ ಪರಾರಿಯಾಗಿದೆ. ಹೀಗಾಗಿ ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ.
ಹುಚ್ಚು ನಾಯಿ ನಿಯಂತ್ರಣಕ್ಕೆ ಕ್ರಮ: ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಉಪ್ಪಿನಂಗಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಬ್ದುಲ್ ಅಸಾಫ್, ಹುಚ್ಚು ನಾಯಿಗಳ ನಿಯಂತ್ರಣಕ್ಕೆ ಪಂಚಾಯತ್ ವತಿಯಿಂದ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ನಾಯಿಗಳನ್ನು ಹಿಡಿಯುವವರಿಗೆ ಈಗಾಗಲೇ ಬರಲು ಹೇಳಿದ್ದೇವೆ. ಅವರು ಮಂಗಳವಾರ ಬರುತ್ತೇನೆ ಎಂದು ತಿಳಿಸಿದ್ದಾರೆ.





