ಮಲ್ಯ ವಿಷಯ ಮೂಲೆಗುಂಪಾಗಲಿದೆಯೇ? : ಕಾಂಗ್ರೆಸ್ ಪ್ರಶ್ನೆ

ಹೊಸದಿಲ್ಲಿ,ಮಾ.14: ವಿಜಯ ಮಲ್ಯ ವಿಷಯದಲ್ಲಿ ತನ್ನ ದಾಳಿಯನ್ನು ಸೋಮವಾರ ಇನ್ನಷ್ಟು ತೀವ್ರಗೊಳಿಸಿದ ಕಾಂಗ್ರೆಸ್ ಪಕ್ಷವು 9091 ಕೋ.ರೂ.ಸಾರ್ವಜನಿಕ ಹಣವನ್ನು ವಸೂಲು ಮಾಡಲು ಸರಕಾರವು ಬ್ರಿಟನ್‌ನಿಂದ ಅವರ ಗಡೀಪಾರನ್ನು ಕೋರುತ್ತದೆಯೇ ಅಥವಾ ಲಲಿತ ಮೋದಿ ಪ್ರಕರಣದಲ್ಲಿ ಮಾಡಿದಂತೆ ಅವರನ್ನು ಹಸ್ತಾಂತರಿಸುವಂತೆ ಕೇಳಿಕೊಂಡು ವರ್ಷಗಟ್ಟಲೆ ಎಳೆಯುವಂತೆ ಮಾಡಿ ಮಲ್ಯ ವಿಷಯವನ್ನು ಮೂಲೆಗುಂಪು ಮಾಡಲಿದೆಯೇ ಎಂದು ಪ್ರಶ್ನಿಸಿತು.
ಕೇಂದ್ರವನ್ನು ಗೇಲಿ ಮಾಡಿದ ಪಕ್ಷದ ಮುಖ್ಯ ವಕ್ತಾರ ರಣದೀಪ ಸುರ್ಜೆವಾಲಾ ಅವರು,ಮಲ್ಯ ಅವರು ಬಿಜೆಪಿ ಸರಕಾರದ 'ಫೇರ್ ಆ್ಯಂಡ್ ಲವ್ಲಿ 'ಯೋಜನೆಯಡಿ ಭಾರತದಿಂದ ಪರಾರಿಯಾಗಿದ್ದಾರೆ. ನಾನ್ ರಿಪೇಯಿಂಗ್ ಇಂಡಿಯನ್ ಮತ್ತು ನಾನ್ ರಿಟರ್ನಿಂಗ್ ಇಂಡಿಯನ್....ಹೀಗೆ ಅವರು ನಿಜಕ್ಕೂ ಡಬಲ್ ಎನ್ನಾರೈ ಆಗಿದ್ದಾರೆ ಎಂದರು.
100 ದಿನಗಳಲ್ಲಿ ವಿದೇಶಗಳಿಂದ ಕಪ್ಪುಹಣವನ್ನು ಮರಳಿ ತರುವ ತನ್ನ ಗಂಭೀರ ಭರವಸೆಯನ್ನು ಈಡೇರಿಸುವ ಬದಲು ಮೋದಿ ಸರಕಾರವು ತನ್ನ 22 ತಿಂಗಳುಗಳ ಆಡಳಿತದಲ್ಲಿ ಮೊದಲು ಲಲಿತ್ ಮೋದಿ ಮತ್ತು ಈಗ ವಿಜಯ ಮಲ್ಯ ಅವರು ವಿದೇಶಕ್ಕೆ ಪರಾರಿಯಾಗಲು ಅವಕಾಶ ಕಲ್ಪಿಸಿದೆ ಎಂದು ಅವರು ಟೀಕಿಸಿದರು.
ಸುರ್ಜೆವಾಲಾ ಮತ್ತು ಪಕ್ಷದ ವಕ್ತಾರ ಪಿ.ಎಲ್.ಪುನಿಯಾ ಅವರು ನೀಡಿದ ಜಂಟಿ ಹೇಳಿಕೆಯಲ್ಲಿ,2016,ಮ.2ರಂದು ದಿಢೀರನೆ ದೇಶವನ್ನು ತೊರೆಯುವ ಮುನ್ನ ಮಲ್ಯ ಅವರು ವಿತ್ತಸಚಿವ ಅರುಣ್ ಜೇಟ್ಲಿಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರೇ ಎನ್ನುವುದನ್ನು ಪ್ರಧಾನಿ ನರೇಂದ್ರ ಮೋದಿಯವರಿಂದ ತಿಳಿಯಲು ಬಯಸಿದರು.
ಕಳೆದ ವರ್ಷದ ಅಕ್ಟೋಬರ್ 12ರಂದು ಮಲ್ಯ ಬಂಧನಕ್ಕಾಗಿ ಲುಕ್ ಔಟ್ ನೋಟಿಸನ್ನು ಹೊರಡಿಸಿದ್ದ ಸಿಬಿಐ ಬಳಿಕ ನ.30ರಂದು ಅದನ್ನು ಕೇವಲ ಮಾಹಿತಿಗಾಗಿ ಲುಕ್ ಔಟ್ ನೋಟಿಸನ್ನಾಗಿ ಬದಲಿಸಿದ್ದು ಏಕೆ ಎನ್ನುವುದನ್ನೂ ಅವರು ಮೋದಿಯವರಿಂದ ತಿಳಿಯಲು ಬಯಸಿದರು. ರಾಜಕೀಯ ಒತ್ತಡದಿಂದ ಹೀಗೆ ಮಾಡಲಾಗಿತ್ತೇ ಎಂದು ಅವರು ಪ್ರಶ್ನಿಸಿದರು.
ಬಡಾಯಿ ಕೊಚ್ಚಿಕೊಳುವುದನ್ನು ಬಿಟ್ಟು ಸತ್ಯವನ್ನು ಎದುರಿಸುವಂತೆ ನಾವು ಮೋದಿ ಸರಕಾರವನ್ನು ಆಗ್ರಹಿಸುತ್ತೇವೆ. ತನ್ನ 'ಫೇರ್ ಆ್ಯಂಡ್ ಲವ್ಲಿ 'ಯೋಜನೆಗೆ ಅಂತ್ಯ ಹಾಡುವಂತೆ ಮತ್ತು ರಾಷ್ಟ್ರೀಯ ಹಿತಾಸಕ್ತಿಯ ದೃಷ್ಟಿಯಿಂದ ಲಲಿತ್ ಮೋದಿ ಮತ್ತು ವಿಜಯ ಮಲ್ಯ ವಿರುದ್ಧ ದೃಢವಾದ ಕ್ರಮವನ್ನು ಕೈಗೊಳ್ಳುವಂತೆ ಆಗ್ರಹಿಸುತ್ತೇವೆ ಎಂದರು.







