ಮರಾಠವಾಡಕ್ಕೆ ಹೋದರೆ ಜನ ಹೊಡೆಯುತ್ತಾರೆ : ಮಾಜಿ ಮುಖ್ಯಮಂತ್ರಿ ಪ್ರಥ್ವಿರಾಜ್ ಚೌಹಾಣ್
.jpg)
ಮುಂಬೈ , ಮಾ. 14 : ಮಹಾರಾಷ್ಟ್ರದ ಮರಾಠವಾಡ ಪ್ರದೇಶದಲ್ಲಿರುವ ಭೀಕರ ಬರಗಾಲದ ಕುರಿತು ಮಾತನಾಡಿರುವ ರಾಜ್ಯದ ಮಾಜಿ ಮುಖ್ಯಮಂತ್ರಿ , ಕಾಂಗ್ರೆಸ್ ಮುಖಂಡ ಪ್ರಥ್ವಿರಾಜ್ ಚೌಹಾಣ್ " ಈಗ ಅಲ್ಲಿಗೆ ನಾವು ಶಾಸಕರು ಯಾರೂ ಹೋಗುವಂತೆಯೇ ಇಲ್ಲ. ಹೋದರೆ ಅಲ್ಲಿ ಜನ ನಮ್ಮನ್ನು ಹೊಡೆಯುವುದು ಖಚಿತ. ಅಲ್ಲಿ ಪರಿಸ್ಥಿತಿ ಅಷ್ಟು ಕೆಟ್ಟದಾಗಿದೆ " ಎಂದು ಒಪ್ಪಿಕೊಂಡಿದ್ದಾರೆ. Firstpost ನೊಂದಿಗೆ ಸಂವಾದದಲ್ಲಿ ಮಾತನಾಡಿದ ಅವರು ಹಲವಾರು ವಿಷಯಗಳ ಬಗ್ಗೆ ಮುಕ್ತವಾಗಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
"ಈಗ ಮಹಾರಾಷ್ಟ್ರದಲ್ಲಿ ಅದರಲ್ಲೂ ವಿಶೇಷವಾಗಿ ಮರಾಠವಾಡದಲ್ಲಿರುವ ನೀರಿನ ಸಮಸ್ಯೆ ಹಾಗು ಬರ ಈವರೆಗೆ ಇಡೀ ದೇಶದಲ್ಲೇ ಕಂಡು ಬಂದಿರಲಿಲ್ಲ. ಅಷ್ಟು ಗಂಭೀರ ಪರಿಸ್ಥಿತಿ ಅಲ್ಲಿದೆ. ಮುಂದಿನ ಮಾನ್ಸೂನ್ ಗೆ ಏನಿಲ್ಲವೆಂದರೂ ನಾಲ್ಕು , ನಾಲ್ಕೂವರೆ ತಿಂಗಳಿವೆ. ಅಲ್ಲೀವರೆಗೆ ಹೇಗೆ ಇದನ್ನು ನಿಭಾಯಿಸುವುದು ಎಂದು ತಿಳಿಯದು. ನಾನು ಹೇಳುವುದು ತಪ್ಪೇ ಆಗಿರಲಿ ಎಂದು ಆಶಿಸುತ್ತೇನೆ. ನನಗೆ ಅಲ್ಲಿನ ಈಗಿನ ಪರಿಸ್ಥಿತಿ ಪ್ರಳಯದ ಮೊದಲಿನ ಪರಿಸ್ಥಿತಿಯೇನೋ ಅನ್ನಿಸುವಷ್ಟು ಭೀಕರವಾಗಿ ಕಾಣಿಸುತ್ತಿದೆ " ಎಂದು ಚೌಹಾಣ್ ಹೇಳಿದ್ದಾರೆ.





