ಮಂಗಳನತ್ತ ಯುರೋಪಿಯನ್-ರಶ್ಯನ್ ಬಾಹ್ಯಾಕಾಶ ನೌಕೆ
ಕೆಂಪು ಗ್ರಹದಲ್ಲಿ ಜೀವಿಗಳಿಗಾಗಿ ಶೋಧ

ಕಝಕ್‌ಸ್ತಾನ್, ಮಾ. 14: ಮಂಗಳ ಗ್ರಹದ ಮೇಲೆ ಜೀವಿಗಳ ಕುರುಹನ್ನು ಪತ್ತೆಹಚ್ಚಲು ಹಾಗೂ ಕೆಂಪು ಗ್ರಹದ ಮಾನವ ಯಾತ್ರೆಗೆ ವೇದಿಕೆ ಸಿದ್ಧಪಡಿಸಲು ಯುರೋಪ್ ಮತ್ತು ರಶ್ಯಗಳು ಜಂಟಿಯಾಗಿ ಬಾಹ್ಯಾಕಾಶ ನೌಕೆಯೊಂದನ್ನು ಸೋಮವಾರ ಉಡಾಯಿಸಿವೆ.
‘ಎಕ್ಸೋಮಾರ್ಸ್’ ಕಾರ್ಯಕ್ರಮದ ಭಾಗವಾಗಿರುವ ನೌಕೆಯನ್ನು ಹೊತ್ತ ಪ್ರೋಟಾನ್ ರಾಕೆಟ್ ಕಝಕ್‌ಸ್ತಾನದ ಬೈಕೊನುರ್ ಬಾಹ್ಯಾಕಾಶ ಕೇಂದ್ರದಿಂದ ಹಾರಿತು. ನೌಕೆಯು ಬಾಹ್ಯಾಕಾಶದಲ್ಲಿ ಏಳು ತಿಂಗಳ ಪ್ರಯಾಣವನ್ನು ಕೈಗೊಳ್ಳಲಿದೆ.
ಮಂಗಳ ಗ್ರಹದ ವಾತಾವರಣದಲ್ಲಿ ಮೀತೇನ್‌ನಂಥ ಅನಿಲಗಳು ಇವೆ ಎಂಬುದನ್ನು ಹಿಂದಿನ ಮಂಗಳ ಯಾನಗಳಲ್ಲಿ ಪತ್ತೆಹಚ್ಚಲಾಗಿದೆ. ಈಗ ಇಂಥ ಅನಿಲಗಳ ಬಗ್ಗೆ ಅಧ್ಯಯನ ನಡೆಸುವ ವಾತಾವರಣ ಶೋಧ ಉಪಕರಣಗಳನ್ನು ಈ ನೌಕೆಯು ಹೊಂದಿದೆ.
ಭೂಮಿಯಲ್ಲಿ ಮೀತೇನ್ ಅನಿಲಕ್ಕೂ ಜೀವಕ್ಕೂ ಅವಿನಾಭಾವ ನಂಟಿದೆ.
ಮಿತನೋಜೀನ್ಸ್ ಎಂಬ ಸೂಕ್ಷ್ಮಾಣು ಜೀವಿಗಳಿಂದ ಮೀತೇನ್ ಉದ್ಭವಿಸಿರಬಹುದು ಎಂದು ವಿಜ್ಞಾನಿಗಳು ಭಾವಿಸಿದ್ದಾರೆ. ಈ ಮಿತನೋಜೀನ್ಸ್‌ಗಳು ಮಂಗಳ ಗ್ರಹದಲ್ಲಿ ಕೋಟ್ಯಂತರ ವರ್ಷಗಳ ಹಿಂದೆಯೇ ನಶಿಸಿರಬಹುದು ಹಾಗೂ ಗ್ರಹದ ಮೇಲ್ಮೈಯಲ್ಲಿ ಅನಿಲವು ಮಂಜುಗಟ್ಟಿರಬಹುದು ಅಥವಾ ಕೆಲವು ಮೀತೇನ್ ಜನಕ ಸೂಕ್ಷ್ಮಾಣುಜೀವಿಗಳು ಈಗಲೂ ಜೀವಂತವಿರಬಹುದಾಗಿದೆ ಎಂದು ಅವರು ನಂಬುತ್ತಾರೆ.





